
ದೊಡ್ಡಬಳ್ಳಾಪುರ (ತೂಬಗೆರೆ) ಏಪ್ರಿಲ್ 14: ಗ್ರಾಮದ ದಲಿತ ಮುಖಂಡ ರಾಮಕೃಷ್ಣರವರ ಮನೆಯಲ್ಲಿ ಉಪಹಾರ ಸೇವಿಸುವುದರ ಮೂಲಕ ಹೋಬಳಿಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರು ಅರ್ಥಪೂರ್ಣ ಅಂಬೇಡ್ಕರ್ ಜಯಂತಿ ಆಚರಿಸಿದರು. ಉಪಹಾರದ ನಂತರ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಅನ್ನದಾನ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಪ್ಪಯಣ್ಣ ಮಾತನಾಡಿ, ಡಾ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಮೂಲಕ ಮಾಡಿಕೊಟ್ಟ ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ. ಶೋಷಿತರ, ದಮನಿತರ ಪರವಾಗಿ, ಅವರ ಹಕ್ಕಿಗಾಗಿ ಮಾಡಿದ ಹೋರಾಟ ಈ ದೇಶಕ್ಕೆ ಅವರು ನೀಡಿರುವ ಅನುಪಮ ಸೇವೆಯನ್ನು ನಾವು ಸದಾ ಸ್ಮರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ ರವರು ಮಾತನಾಡಿ ಅಂಬೇಡ್ಕರ್ ವಿಶ್ವದ ಮಹಾನ್ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಅಂಬೇಡ್ಕರ್ ಶೋಷಿತರ ಬದುಕನ್ನು ಕಟ್ಟಿಕೊಳ್ಳಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕೇವಲ ದಲಿತ ವರ್ಗದವರಲ್ಲದೇ ಇಡೀ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದ ಜನರ ಧ್ವನಿಯಾಗಿ ಸಮಾನತೆ, ಸಹೋದರತೆಗಾಗಿ, ಮೇಲು-ಕೀಳು ಎಂಬ ಭೇದ-ಭಾವ ಇರಬಾರದೆಂದು ತಿಳಿಸಿದ್ದಾರೆ ಎಂದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಯಣ್ಣ, ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹರೀಶ್ ಗೌಡ, ಹೋಬಳಿ ಬಿಜೆಪಿ ಅಧ್ಯಕ್ಷ ವಾಸುದೇವ್ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ್, ದೊಡ್ಡಬಳ್ಳಾಪುರ ನಗರಸಭಾ ಮಾಜಿ ಸದಸ್ಯ ತಳವಾರ ನಾಗರಾಜ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ದಲಿತ ಮುಖಂಡರಾದ ಕೊನಘಟ್ಟ ಆನಂದ್, ನಾಗರಾಜ್, ರಾಮಕೃಷ್ಣ, ಮುನಿರಾಜು, ಸುರೇಶ್ ,ಪ್ರಭು . ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಚ್ಚಹಳ್ಳಿ ನಾಗರಾಜ್ ಜೆಡಿಎಸ್ ಮುಖಂಡರಾದ ಉದಯ್ ಆರಾಧ್ಯ, ಮುರುಳಿ, ಮಂಜುನಾಥ್ ,ವಿವಿಧ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಸುರೇಶ್ ಬಾಬು, ದುರ್ಗೇನಹಳ್ಳಿ ನಾಗರಾಜ್, ತೂಬಗೆರೆ ಮುನಿಕೃಷ್ಣಪ್ಪ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರುಗಳು, ಭಾಗವಹಿಸಿದ್ದರು.