ದೊಡ್ಡಬಳ್ಳಾಪುರ ಮೇ 05 : ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ. ಮುಖಂಡರು ಹಾಗೂ ಪದವೀಧರರ ಉತ್ತಮ ಸ್ಪಂದನೆ ದೊರೆತಿದ್ದು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ ಎಂದು ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ತಿಳಿಸಿದರು .
ನಗರದ ಖಾಸಗಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ 2012 ಮತ್ತು 2018 ರಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕೆಪಿಸಿಸಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದು,ಸೋಲು – ಗೆಲುವನ್ನು ಸಮನಾಗಿ ಸ್ವೀಕರಿಸುವ ನಾನು, ಸೋಲನ್ನು ಗೆಲುವಿನ ಮೆಟ್ಟಿಲೆಂದು ಭಾವಿಸಿ ನನ್ನ ಕೆಲಸವನ್ನು ಮುಂದುವರಿಸಿಕೊಂಡು ಬಂದವನು. ಕಳೆದ 14 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಾದ್ಯಂತ ಪದವಿದರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ.ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನೀಗಿಸಲು ಪದವೀಧರರಿಗೆ ಸುಮಾರು 9000 ಕ್ಕೂ ಅಧಿಕ ಉದ್ಯೋಗ ಕಲ್ಪಿಸುವ ಮೂಲಕ ಕ್ಷೇತ್ರದ ಪದವೀಧರೊಂದಿಗೆ ಮತ್ತಷ್ಟು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಮುಖಂಡರು ಪದಾಧಿಕಾರಿಗಳು ಹಾಗೂ ಕ್ಷೇತ್ರದ ಶಿಕ್ಷಕ ವರ್ಗ ಭಾಗವಹಿಸಿ ಬೆಂಬಲಿಸಲು ಮುಂದಾಗಿರುವುದು ಸಂತಸ ತಂದಿದೆ.
ನಾನೊಬ್ಬ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಮುಂದೆ ಪದವೀಧರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ರಾಜ್ಯಮಟ್ಟದ ಧ್ವನಿಯಾಗಿ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿ ಮತದಾರರಿಗೂ ತಲುಪಿಸುವ ಕಾರ್ಯ ನಡೆಯಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪದವೀಧರರ, ಶಿಕ್ಷಕರ ಮತ್ತು ನಿರುದ್ಯೋಗಿ ಪದವೀಧರರ ಹಿತ ಕಾಯುವ ಜೊತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಲಾಡ್ಯರಾದ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯ ಕರ್ನಾಟಕವನ್ನು ಕಟ್ಟಿಕೊಳ್ಳಲು ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಪದಾಧಿಕಾರಿಗಳು, ತಾಲ್ಲೂಕಿನ ಶಿಕ್ಷಕ ವರ್ಗ ಉಪಸ್ಥಿತರಿದ್ದರು
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ
ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಚುನಾವಣಾ ಆಯೋಗವು ದಿನಾಂಕವನ್ನು ವಿಸ್ತರಿಸಿ ಮತ್ತೆ ಸಮಯಾವಕಾಶ ಮಾಡಿಕೊಟ್ಟಿರುತ್ತದೆ. ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಉಳಿದಿರಬಹುದಾದ ತಮ್ಮ ಪದವೀಧರ ಸ್ನೇಹಿತರ ಮತ್ತು ಕುಟುಂಬ ಸದಸ್ಯರ ಹೆಸರುಗಳನ್ನು ಕೂಡಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಮನವಿ ಮಾಡಿದರು.
