
ದೊಡ್ಡಬಳ್ಳಾಪುರ ಮೇ 24 ( ವಿಜಯಮಿತ್ರ ) : ಸಾವಿರಾರು ವರ್ಷಗಳಿಂದ ಮನುಷ್ಯನ ಮನಸ್ಸಿನ ಮೇಲೆ ನಿರಂತರ ಅತ್ಯಾಚಾರವಾಗಿದೆ! ಆ ಮೂಲಕ ಮನುಷ್ಯನ ಮನಸ್ಸಿಗೆ ಸ್ವಾತಂತ್ರ್ಯವಿರಲಿಲ್ಲ.ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮತ್ತು ಸಮಸ್ಯೆಗಳನ್ನು ನಿವಾರಣೆ ಮಾಡುವ ಸ್ವಾತಂತ್ರ್ಯವನ್ನು ಕಂಡುಕೊಂಡವರೇ ಭಗವಾನ್ ಬುದ್ಧ. ಬುದ್ಧನ ಮಾರ್ಗವನ್ನೇ ಮುಂದುವರೆಸಿಕೊಂಡು ಬಂದವರೇ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ಆಧುನಿಕ ಬುದ್ಧ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ: ಡಾ: ಪ್ರಕಾಶ್ ಮಂಟೇದ ಅವರು ಅಭಿಪ್ರಾಯ ಪಟ್ಟರು.
ಅವರು ತಾಲ್ಲೂಕಿನ ಹಣಬೆ ಗ್ರಾಮದಲ್ಲಿ ನಡೆದ ಭಗವಾನ್ ಬುದ್ಧರ 2568ನೇ ಜಯಂತಿ ಹಾಗೂ 2ನೇ ವರ್ಷದ ಪೌರ್ಣಮಿ ಆಚರಣಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಈ ಜಗತ್ತಿನಲ್ಲಿ ಸ್ಪೃಶ್ಯ, ಅಸ್ಪೃಶ್ಯ ಎಂಬುದು ಇಲ್ಲ ಎಂಬ ಸತ್ಯವನ್ನು ಭಗವಾನ್ ಬುದ್ಧ ಈ ಜಗತ್ತಿಗೆ ತೋರಿಸಿಕೊಟ್ಟು, ಭ್ರಮೆಗಳನ್ನು ಓಡಿಸಿದ ಬುದ್ಧ, ನಿನಗೆ ನೀನೇ ಚೈತನ್ಯ ಎಂಬ ಸತ್ಯವನ್ನು ತಿಳಿಸಿದರು ಎಂದ ಅವರು ಪ್ರಸ್ತುತ ಸಂದರ್ಭದಲ್ಲಿ ಸಾಕ್ಷರರು ಸಂಬಳ ಬಂದಾಗ ಸಾಯಿಬಾಬಾ, ಸಂಬಳವಿಲ್ಲದಾಗ ಬಾಬಾ ಸಾಹೇಬ ಎಂಬ ಪ್ರವೃತ್ತಿಯನ್ನು ನಿಲ್ಲಿಸಿ, ಬುದ್ಧನೆಡೆಗೆ ಎಲ್ಲರೂ ಸಾಗಬೇಕಿದೆ ಎಂದು ಕಿವಿ ಮಾತು ಹೇಳಿದರು.
ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಸಿ. ಗುರುರಾಜಪ್ಪ ಅವರು ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ವೈಜ್ಞಾನಿಕ ಆಶಯಗಳಿಗೆ ಅನುರೂಪವಾದ ಧರ್ಮ ಯಾವುದಾದರೂ ಇದ್ದರೆ ಅದುವೇ ಬುದ್ಧ ಧರ್ಮ ಎಂದು ಹೇಳಿದ ಅವರು ರಾಜಕೀಯ ಅಧಿಕಾರ ಸಂತೋಷವನ್ನು ತರುವುದಿಲ್ಲ! ಆದರೆ ಮನುಷ್ಯ ಅನ್ನ, ನೀರು, ನೆರಳು, ಗೌರವ ಇವುಗಳಿಂದ ದೂರವಿರಲು ಸಾಧ್ಯವಿಲ್ಲ. ಇವುಗಳೆಲ್ಲವೂ ಎಲ್ಲರಿಗೂ ಸಿಗಬೇಕಾದರೆ ರಾಜಕೀಯ ವ್ಯವಸ್ಥೆ ಮತ್ತು ಹೊಣೆಗಾರಿಕೆ ಅತ್ಯಂತ ಅಗತ್ಯ ಎಂಬ ಭಗವಾನ್ ಬುದ್ಧರು ಹೇಳಿದ ಈ ಸತ್ಯಗಳ ಆಧಾರದ ಮೇಲೆಯೇ ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮ ರಾಷ್ಟ್ರದ ಸಂವಿಧಾನ ರಚನೆ ಮಾಡಿದ್ದಾರೆ. ಪ್ರಸ್ತುತ ಕಾನೂನು ವ್ಯವಸ್ಥೆಯನ್ನು ದಮನ ಮಾಡುವ ಕುತಂತ್ರದಿಂದ ಧರ್ಮ ಮತ್ತು ರಾಜಕೀಯ ವ್ಯವಸ್ಥೆಯನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮುಲಭೂತವಾದಿ ರಾಜಕೀಯ ನಾಯಕರು ಮಾಡುತ್ತಿದಾರೆ. ಇದು ಮುಂದುವರೆದರೆ ಜನಸಾಮಾನ್ಯರ ಬದುಕು ಅಪಾಯಕ್ಕೆ ಒಳಗಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಯ ತಾಂತ್ರಿಕ ಅಧಿಕಾರಿ ರಾಜೇಂದ್ರ ರವರು ಮಾತನಾಡಿ ಬುದ್ಧಧರ್ಮದಲ್ಲಿ ಮಾತ್ರ ವೈಜ್ಞಾನಿಕ ಮನೋ ಧರ್ಮ ಅಡಗಿದೆ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿದೆ ಈ ನಿಟ್ಟಿನಲ್ಲಿ ಇಡೀ ವಿಶ್ವವೇ ಬುದ್ಧಮಯವಾಗುವ ಎಲ್ಲಾ ಲಕ್ಷಣಗಳಿವೆ ಎಂದರು.
ಕುಂದಾಣ ಬುದ್ಧವಿಹಾರದ ಅನಿರುದ್ಧ ಬಂತೇಜಿರವರು ಮತ್ತು ಉಪಾಸಕರಾದ ಸಿಧಾರ್ಥರವರು ಭಗವಾನ್ ಬುದ್ಧರ ತ್ರಿಸರಣ ಬೋದಿಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರೊ, ಚಂದ್ರಪ್ಪರವರು ಉತ್ಪಾದಕರು ಮತ್ತು ಅನುತ್ಪಾದಕರ ನಡುವೆ ನಡೆಯುತ್ತಿರುವ ಶೀತಲಸಮರದ ತಂತ್ರಗಾರಿಕೆಯನ್ನು ಅರ್ಥೈಸಿಕೊಂಡು ಬುದ್ಧನೆಡೆಗೆ ನಮ್ಮೆಲ್ಲರ ನಡಿಗೆ ಹಾಕಬೇಕಾಗಿದೆ ಎಂದರು.
ಕಾರ್ಯಕ್ರಮದ ವ್ಯವಸ್ಥಾಪಕರಾದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೊಡ್ಡರಂಗಪ್ಪ, ರಾಜಗೋಪಾಲ, ನಾರಾಯಣಸ್ವಾಮಿ, ರಮೇಶ್, ಗಂಗಪ್ಪ, ಜಗಧೀಶ್, ರಾಮಕೃಷ್ಣಪ್ಪ, ಮುನಿಯಪ್ಪ, ಮುನೇಗೌಡ, ಸುರೇಶ್, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.