
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಕಾಚಹಳ್ಳಿ ಗ್ರಾಮದ ಕೆರೆಯ ಪಕ್ಕದ ಜಮೀನಿನಲ್ಲಿ ವೈಜ್ಞಾನಿಕವಾಗಿ ರಸ್ತೆ ಕಾಮಗಾರಿಯಿಂದ ಕೆರೆ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು ಜಮೀನಿನ ಮಾಲೀಕರು ತಮ್ಮ ಜಮೀನಿಗೆ ಹೋಗಲು ಪರದಾಡುವ ಸ್ಥಿತಿ ಎದುರಾಗಿದೆ.
ಈ ವೇಳೆ ಜಮೀನಿನ ಮಾಲೀಕರಾದ ಸುನಿಲ್ ಮಾತನಾಡಿ ಕೆರೆಗೆ ನೀರು ಹೋಗುವ ದಾರಿಯನ್ನೆಲ್ಲ ಮುಚ್ಚಿದ್ದು ಕೆರೆಗೆ ಹೋಗುವ ನೀರು ನಮ್ಮ ಜಮೀನುಗಳಿಗೆ ನುಗ್ಗಿದೆ. ಸ್ಥಳಿಯ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿದ್ದು ಅವರು ತಾತ್ಕಾಲಿಕವಾಗಿ ಮೂರು ದೊಡ್ಡ ಪೈಪುಗಳನ್ನು ಅಳವಡಿಸುವುದಾಗಿ ಕಾಂಟ್ರಾಕ್ಟರ್ ಹೇಳಿದ್ದಾರೆ ಎಂದರು
ಸಂಬಂಧಪಟ್ಟ ಕಾಂಟ್ರಾಕ್ಟರ್ ಹಾಗೂ ಪಂಚಾಯತಿ ಅಧಿಕಾರಿಗಳು ಶೀಘ್ರ ಗತಿಯಲ್ಲಿ ನಮ್ಮ ಸಮಸ್ಯೆಗೆ ಪರಿಹಾರ ಕೊಡದೆ ಇದ್ದ ಪಕ್ಷದಲ್ಲಿ ಜೆಸಿಪಿ ಮುಖಾಂತರ ರೋಡನ್ನು ತೆರವು ಮಾಡಲಾಗುವುದು.ಕಳೆದ ಮೂರು ವರ್ಷಗಳಿಂದ ನಾವು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಇದರಿಂದ ಮೂರ್ನಾಲ್ಕು ಎಕರೆ ಜಮೀನಿಗೆ ನೀರು ನಿಂತಿದೆ ಈ ಕಾರಣದಿಂದಾಗಿ ಜಮೀನಿನ ಕಾಂಪೌಂಡ್ ಹಾಗೂ ಮರಗಳು ಹಾಳಾಗುತ್ತಿವೆ ಎಂದರು.
ಮತ್ತೊಂದು ಜಮೀನಿನ ಮಾಲೀಕ ಭರತ್ ಬಾಬು ಮಾತನಾಡಿ ಇದೇ ರೀತಿ ಜಮೀನಿನಲ್ಲಿ ನೀರು ನಿಂತರೆ ನಮಗೆ ಮುಂಗಾರು ಬೆಳೆಗೆ ತೊಂದರೆ ಆಗುತ್ತದೆ . ಯಾವುದೇ ರೀತಿಯ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ರೈತ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಶೀಘ್ರಗತಿಯಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಪಂಚಾಯಿತಿ ಅಧಿಕಾರಿಗಳಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದರು .