
ದೊಡ್ಡಬಳ್ಳಾಪುರ ಆಗಸ್ಟ್ 21( ವಿಜಯಮಿತ್ರ ) : ತಾಲೂಕಿನ ಬಾಶೆಟ್ಟಹಳ್ಳಿ ವ್ಯಾಪ್ತಿಯ ವಿಜಯನಗರದಲ್ಲಿರುವ ಶ್ರೀ ಕ್ಷೇತ್ರ ರಾಯರ ಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಪ್ರಹ್ಲಾದ ದೇವರ ವಿಶೇಷ ರಥಯಾತ್ರೆ ನಡೆಸಲಾಯಿತು .
ಈ ಕುರಿತು ದೇವಾಲಯದ ಪ್ರಧಾನ ಅರ್ಚಕ ಗುರುರಾಜ್ ಆಚಾರಿ ಮಾತನಾಡಿ ಈ ಬೃಂದಾವನವು 48ಸಾಲಿಗ್ರಾಮಗಳಿಂದ ನಿರ್ಮಿಸಲ್ಪಟ್ಟಿದೆ.ಇಂದು ವಿಶೇಷ ದಿನವಾಗಿದ್ದು ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರರ ಮಧ್ಯಾರಾಧನೆ ದಿನವಾಗಿದೆ. ಮೂರು ದಿನಗಳ ಸತತ ಆರಾಧನೆಯಲ್ಲಿ ಬೃಂದಾವನ ಶ್ರೀಗಳು ಬಹಿರ್ಮುಖವಾಗಿ ಭಕ್ತಾದಿಗಳನ್ನು ನೋಡುವ ಮೂಲಕ ಸಕಲ ಇಷ್ಟಾರ್ಥಗಳನ್ನು ಪೂರ್ಣಗೊಳಿಸುತ್ತಾರೆ. ಶ್ರೀ ಗುರು ರಾಘವೇಂದ್ರರ ಆರಾಧನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಕಲ ದೋಷ ನಿವಾರಣೆಯ ಜೊತೆಗೆ ಉತ್ತಮ ಆರೋಗ್ಯ ಆಯಸ್ಸು ಲಭಿಸುತ್ತದೆ. ಕಳೆದ ಮೂರು ದಿನಗಳಿಂದ ರಾಯರ ಆರಾಧನೆಯಲ್ಲಿ ಸಾವಿರಾರು ಭಕ್ತಾದಿಗಳು ತಮ್ಮ ತನು ಮನ ಧನವನ್ನು ರಾಯರಿಗೆ ಸಮರ್ಪಿಸುವ ಮೂಲಕ ಭಕ್ತಿ, ಭಾವದೊಂದಿಗೆ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಸರ್ವರಿಗೂ ಶುಭವಾಗಲಿ ಆಗಸ್ಟ್ 22ರಂದು ಉತ್ತರ ಆರಾಧನೆ ಇದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ರಾಯರು ಹಲವಾರು ಪವಾಡಗಳನ್ನು ಮಾಡಿದ್ದು ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಅವರ ಆರಾಧನೆಯಲ್ಲಿ ಪಾಲ್ಗೊಳುವುದೇ ಒಂದು ಭಾಗ್ಯ ನಮ್ಮ ಪೂರ್ವ ಜನ್ಮದ ಪುಣ್ಯ ನಾವು ರಾಯರ ಆರಾಧನೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ ಎಂದು ನೆರೆದಿದ್ದ ಭಕ್ತದಿಗಳು ಅಭಿಪ್ರಾಯವ್ಯಕ್ತಪಡಿಸಿದರು.