
ಬೆಂಗಳೂರಿನ ಕಾನ್ಶಿರಾಮ್ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಸಾಹೇಬರ ಅನುಯಾಯಿಗಳ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಬಹುಜನ ಸಮಾಜ ಪಾರ್ಟಿ ರಾಜಕೀಯ ಪಕ್ಷದ ಹೆಸರನ್ನು “ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ” ಎಂದು ಘೋಷಣೆ ಮಾಡಲಾಯಿತು.
ಬಹುಜನ ಸಮಾಜ ಚಳುವಳಿಯ ಹಿರಿಯ ನಾಯಕ ಮಾರಸಂದ್ರ ಮುನಿಯಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಬಹುಜನ ಚಳುವಳಿಯ ಹಿರಿಯ ನಾಯಕರಾದ ಎಂ. ಗೋಪಿನಾಥ್ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ಮತ್ತು ಆರ್ ಮುನಿಯಪ್ಪ ಅವರನ್ನು ರಾಜ್ಯ ಸಂಯೋಜಕರನ್ನಾಗಿ ಆಯ್ಕೆ ಮಾಡಲಾಯಿತು.ಅಲ್ಲದೆ, 12 ಜನ ಹಿರಿಯ ನಾಯಕರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿಯೂ, 21 ಜನ ಮುಖಂಡರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ, 17 ಜನ ಮುಖಂಡರನ್ನು ರಾಜ್ಯ ಕಾರ್ಯದರ್ಶಿಗಳನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೆಯೇ 24 ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಯಿತು.
ಕನಕಪುರದ ಆಕಾಶ್ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಮತ್ತು ಬಾಮ್ಸೆಫ್ ನ ಹಿರಿಯ ಮುಖಂಡರಾದ ಬಿಎಸ್ಎನ್ಎಲ್ ಚಂದ್ರಶೇಖರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಹಾಗೂ ಬೆಂಗಳೂರಿನ ಬಹುಜನ ಚಳುವಳಿಯ ನಾಯಕ ಎಮ್ ಸತೀಶ್ ಚಂದ್ರ ಅವರು ಸ್ವಾಗತ ಕೋರುವ ಮೂಲಕ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು .
ಸಭೆಯನ್ನು ಉದ್ದೇಶಿಸಿ ಎಂ. ಗೋಪಿನಾಥ್,ಆರ್ ಮುನಿಯಪ್ಪ, ವೆಂಕಟಗಿರಿಯಯ್ಯ, ಲೋಕೇಶ್ ಚಂದ್ರ, ಮಣ್ಣೂರ್ ನಾಗರಾಜ್, ಪ್ರೊಫೆಸರ್ ಮೊಹಮ್ಮದ್ ಆಲಿ, ಕೆ.ಬಿ.ವಾಸು,ವೈ.ಸಿ. ಕಾಂಬಳೆ, ಗುರುಮೂರ್ತಿ ಮುಂತಾದವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾರಸಂದ್ರ ಮುನಿಯಪ್ಪ ಮಾತನಾಡಿ ಹೊಸ ಪಕ್ಷದ ಹುದ್ದೆಯನ್ನು ವಹಿಸಿಕೊಂಡು ಬಾಬಾಸಾಹೇಬರ ಮತ್ತು ಕಾನ್ಶಿರಾಮ್ ಜೀ ಅವರ ಕನಸು ನನಸು ಮಾಡಲು ಶ್ರಮಿಸುವುದಾಗಿ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.