
ದೊಡ್ಡಬಳ್ಳಾಪುರ : ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಪ್ರತಿದಿನ ನೂರಾರು ಲಾರಿಗಳು ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುತ್ತಿವೆ. ಇವರೆಗೂ ಕಸ ತುಂಬಿದ ದಾಬಸ್‌ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುತ್ತಿದ್ದವು. ಆದರೆ, ಹುಲಿಕುಂಟೆ ಸಮೀಪ ಟೋಲ್ ಪ್ರಾರಂಭವಾದ ನಂತರ ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಈಗ ದೊಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಮೂಲಕ ಸಂಚರಿಸಲು ಪ್ರಾರಂಭಿಸಿವೆ ಎಂದು ನಗರಸಭೆ ಸದಸ್ಯ ಬಂತಿ ವೆಂಕಟೇಶ್ ತಿಳಿಸಿದರು.
ತಾಲೂಕಿನ ಕುರುಬರಹಳ್ಳಿ ಸಮೀಪದ ಸ್ಯಾಟಲೈಟ್ ರಿಂಗ್ ರೋಡ್ ಬಳಿ ಸುಮಾರು 9ಕಸದ ಲಾರಿಗಳನ್ನು ತಡೆದು ಲಾರಿ ಚಾಲಕರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಎಲ್ಲಾ ಲಾರಿಗಳನ್ನು ಕೂಡಲೇ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಪೊಲೀಸ್ ಇಲಾಖೆಗೆ ಮನವಿ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಟೋಲ್ ಶುಲ್ಕ ತಪ್ಪಿಸಲು ಬಿಬಿಎಂಪಿ ಕಸದ ಲಾರಿಗಳು ಅಡ್ಡದಾರಿ ಹುಡುಕಿಕೊಂಡಿದ್ದು .
ತಾಲೂಕಿನ ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ದಿನನಿತ್ಯ ಸುಮಾರು 40-50 ಕಸದ ಲಾರಿಗಳು ಸಂಚಾರ ಮಾಡುತ್ತಿದ್ದು, ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ಬಿಬಿಎಂಪಿ ಕಸ ತುಂಬಿದ ಲಾರಿಗಳ ಸಂಚಾರ ಮಿತಿ ಮೀರಿದೆ. ಅಪಘಾತ ನಡೆಯುವ ಮುನ್ನ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಗಳ ಮೂಲಕ ಕಸ ತುಂಬಿದ ಲಾರಿಗಳು ಹೋಗುವಾಗ ಬರುತ್ತಿರುವ ದುರ್ನಾತ ಹಾಗೂ ರಸ್ತೆಯುದ್ದಕ್ಕೂ ಲಾರಿಯಿಂದ ಸೋರುತ್ತಿರುವ ತ್ಯಾಜ್ಯ ನೀರಿನಿಂದ ಗ್ರಾಮಸ್ಥರು ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಟೋಲ್ ಶುಲ್ಕ ಉಳಿಸುವ ನೆಪದಲ್ಲಿಸ ಕಸದ ಲಾರಿಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಕಸದ ಲಾರಿಗಳು ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಇತರೆಡೆ ಅಪಘಾತ ನಡೆಸಿ ಹತ್ತಾರು ಜನರ ಜೀವ ತೆಗೆದಿರುವ ಪ್ರಕರಣಗಳು ಕಣ್ಮುಂದೆ ಇವೆ, ಇಂತಹ ಲಾರಿಗಳಿಂದ ನಮ್ಮ ಭಾಗದಲ್ಲೂ ಅನಾಹುತ ಸಂಭವಿಸುವ ಮುನ್ನ ಕಸದ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಬಂದ್ ಮಾಡುವಂತೆ ಶಾಸಕ ಧೀರಜ್ ಮುನಿರಾಜ್ ಅವರು ಸದನದಲ್ಲಿ ಹಲವಾರು ಬಾರಿ ಧ್ವನಿ ಎತ್ತಿದ್ದಾರೆ. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವಿರುವ ಸುತ್ತಾಮುತ್ತ ಹಳ್ಳಿಗಳ ಜನರು ಹಲವಾರು ಅರೋಗ್ಯ ಸಮಸ್ಯೆಗಳಿಂದ ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗದೇ ಊರು ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನಮ್ಮ ದೊಡ್ಡಬಳ್ಳಾಪುರ ಮಾರ್ಗವಾಗಿ ಕಸದ ಲಾರಿಗಳು ಸಂಚರಿಸಿ ಸಾರ್ವಜನಿಕರ ಆರೋಗ್ಯ ಮತ್ತು ಪ್ರಾಣಕ್ಕೆ ಕುತ್ತು ತರುವ ಮೊದಲೇ ನಾವು ಎಚ್ಚೆದ್ದುಕೊಳ್ಳಬೇಕಿದೆ ಎಂದು ತಿಳಿಸಿದರು.