
ದೊಡ್ಡಬಳ್ಳಾಪುರ : ಬಯಲು ಬಸವಣ್ಣ ಜಾತ್ರಾ ಪ್ರಯುಕ್ತ (ಕಡಲೆಕಾಯಿ ಪರಿಷೆ)ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದ ವತಿಯಿಂದ 9 ಜಿಲ್ಲೆಗಳ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಈ ಪಂದ್ಯಾವಳಿ ಮೂಲಕ ತಾಲೂಕಿನ ಯುವಕರಿಗೆ, ಮಕ್ಕಳಿಗೆ ಕುಸ್ತಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಮುಂದಾಗಿದ್ದೇವೆ, ಈ ಕಾರ್ಯಕ್ರಮದಲ್ಲಿ ಸುಮಾರು 9 ಜಿಲ್ಲೆಗಳ ಕುಸ್ತಿಪಟುಗಳು ಪಾಲ್ಗೊಳ್ಳುತ್ತಿದ್ದು ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿದೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿಜೇತರಿಗೆ ಬಿರುದು ನೀಡುವುದರ ಜೊತೆ ಜೊತೆಗೆ ಬೆಳ್ಳಿ ಗದೆಯನ್ನು ಬಹುಮಾನವಾಗಿ ನೀಡಲಾಗುವುದು ಎಂದರು.
ಪೈಲ್ವಾನ್ ಚೌಡಯ್ಯ ಮಾತನಾಡಿ ಈ ಪಂದ್ಯಾವಳಿಗಳನ್ನು ತಾಲೂಕಿನ ಹೆಸರಾಂತ ಗರಡಿ ಮನೆಗಳಾದ ಹನುಮಾನ್ ಗರಡಿ, ದೊಡ್ಡವೆಂಕ್ಟ್ರೋಣಪ್ಪ ಗರಡಿ, ಕೋಟೆ ಗರಡಿ, ಎಸ್ ಆರ್ ಸಿ ಗರಡಿ, ಇಂದಿನ ಪೀಳಿಗೆಗೆ ಮಟ್ಟಿ ಕುಸ್ತಿ ಎಂದರೆ ಏನೆಂಬುದೇ ತಿಳಿದಿಲ್ಲ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಇಂದಿನ ಪೀಳಿಗೆಗೆ ಮಟ್ಟಿ ಕುಸ್ತಿಯನ್ನು ಪರಿಚಯಿಸುವದಷ್ಟೇ ಅಲ್ಲದೆ, ಈ ಕಲೆಯನ್ನು ಮುಂದಿನ ಪೀಳಿಗೆಗೆ ರವಾನಿಸುವುದಾಗಿದೆ ಎಂದರು.
ಸಂಘದ ಸಂಘಟನಾ ಕಾರ್ಯದರ್ಶಿ ಗಣೇಶ್ ರಾಜಘಟ್ಟ ಮಾತನಾಡಿ ಒಟ್ಟು ಆರು ವಿಭಾಗಗಳಲ್ಲಿ ಕುಸ್ತಿಗಳನ್ನು ಆಯೋಜನೆ ಮಾಡಲಾಗಿದ್ದು ಸರಿಸುಮಾರು ಒಂಬತ್ತು ಜಿಲ್ಲೆಗಳಿಂದ ಕುಸ್ತಿಪಟುಗಳು ಭಾಗವಹಿಸುತ್ತಿದ್ದಾರೆ, ಇದು ನಮ್ಮ ದೇಸಿ ಕಲೆ ಈ ಪಂದ್ಯಾವಳಿಗಳನ್ನು ಕುಟುಂಬ ಸಮೇತರಾಗಿ ತಾಲೂಕಿನ ಜನತೆ ಬಂದು ಪ್ರೋತ್ಸಾಹಿಸಬೇಕಿದೆ, ಇಂದಿನ ಪೀಳಿಗೆಗೆ ಗರಡಿ ಮನೆ ಮಟ್ಟಿ ಸಾಧನೆಯೆಂದರೆ ಏನು ಎಂಬುದನ್ನು ತಿಳಿಸಬೇಕಿದೆ, ಕುಸ್ತಿ ಪರಂಪರೆಯಲ್ಲಿ ದೊಡ್ಡಬಳ್ಳಾಪುರದ ಹೆಸರು ಪ್ರಮುಖವಾಗಿದೆ ಆದರೆ ಪ್ರಸ್ತುತ ಕುಸ್ತಿಕಲೆ ನಶಿಸಿ ಹೋಗುತ್ತಿದ್ದು ಅದನ್ನು ಉಳಿಸುವ ಕಾರ್ಯಕ್ಕೆ ನಾವು ಮುಂದಾಗಿದ್ದೇವೆ , ತಾಲೂಕಿನ ಜನತೆಯ ಪ್ರೋತ್ಸಾಹ ಆಶೀರ್ವಾದದ ಅವಶ್ಯಕತೆ ಇದೆ ಎಂದರು.
ಯಾರೆಲ್ಲಾ ಭಾಗವಹಿಸಬಹುದು..??? ಏನು ನಿಬಂಧನೆ….???
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರದ ಜಿಲ್ಲೆಗಳ ಕುಸ್ತಿ ಪಟುಗಳಿಗೆ ಮಾತ್ರ ಅವಕಾಶವಿರುತ್ತದೆ.
ನಿಬಂಧನೆಗಳು:
1. ದಿನಾಂಕ 25-11-2024 ರಂದು ಬೆಳಿಗ್ಗೆ 7-00 ರಿಂದ 10-00 ಗಂಟೆವರೆಗೆ ದೇಹ ತೂಕ ತೆಗೆದುಕೊಳ್ಳಲಾಗುವುದು.
2. ಮಧ್ಯಾಹ್ನ 12-00 ಗಂಟೆಯಿಂದ ಕುಸ್ತಿ ಪಂದ್ಯಗಳು ಪ್ರಾರಂಭವಾಗುವವು.
3. ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಪೈಲ್ವಾನರು ತಮ್ಮ ಆಧಾರ್ ಕಾರ್ಡ್ ಅಸಲಿ ಪ್ರತಿ ಮತ್ತು ನಕಲು ಪ್ರತಿ ಕಡ್ಡಾಯವಾಗಿ ತರುವುದು.
4. ಎಲ್ಲಾ ಕುಸ್ತಿ ಪಂದ್ಯಾವಳಿಗಳನ್ನು ಸಾಂಪ್ರದಾಯಿಕ ಮಣ್ಣಿನ ಅಖಾಡದಲ್ಲಿ ನಡೆಸಲಾಗುವುದು.
5. ಎಲ್ಲಾ ಕುಸ್ತಿ ಪಂದ್ಯಾವಳಿಗಳನ್ನು ಅಂತರ ರಾಷ್ಟ್ರೀಯ ನಿಯಮಗಳ ಅನುಸಾರ (ಅಂಕಗಳ ಆಧಾರದಲ್ಲಿ) ನಡೆಸಲಾಗುವುದು.
6. ಫೈನಲ್ ಹೊರತು ಪಡಿಸಿ ಎಲ್ಲಾ ಕುಸ್ತಿ ಪಂದ್ಯಗಳು 6 ನಿಮಿಷ ಕಾಲಾವಧಿ ಹೊಂದಿರುತ್ತದೆ.
7. ಫೈನಲ್ ಕುಸ್ತಿ ಪಂದ್ಯ 10 ನಿಮಿಷ ಕಾಲಾವಧಿಯೊಳಗೆ ಚಿತ್ ಮಾಡುವುದು, ಇಲ್ಲದಿದ್ದಲ್ಲಿ 3 ನಿಮಿಷಗಳ ಅಧಿಕ ಕಾಲಾವಧಿ ನೀಡಿ ಅಂಕಗಳ ಲೆಕ್ಕದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
8. ಯಾವುದೇ ಕುಸ್ತಿ ಪಟು ಆಸಭ್ಯವಾಗಿ ವರ್ತಿಸಿದಲ್ಲಿ ಪಂದ್ಯಾವಳಿಯಿಂದ ಹೊರಹಾಕಲಾಗುವುದು.
9. ಭಾಗವಹಿಸುವ ಎಲ್ಲಾ ಕುಸ್ತಿ ಪಟುಗಳಿಗೆ 25-11-2024 ರಂದು ಊಟದ ವ್ಯವಸ್ಥೆ ಇರುತ್ತದೆ.
10. ತೀರ್ಪುಗಾರರ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಸುದ್ದಿಗೋಷ್ಠಿಯಲ್ಲಿ ಪೈಲ್ವಾನ್ ಚೌಡಪ್ಪ,ಪೈಲ್ವಾನ್ ಪಿಳ್ಳಣ್ಣ, ಪೈಲ್ವಾನ್ ಲಕ್ಷ್ಮಿ ನಾರಾಯಣ ,ಎಸ್ ಪದ್ಮನಾಭ ,ಆರ್ ಬಂತಿ ವೆಂಕಟೇಶ್ ,ಪೈಲ್ವಾನ್ ಶ್ರೀನಿವಾಸ್ ,ಪೈಲ್ವಾನ್ ವಿಶ್ವನಾಥ್, ಪೈಲ್ವಾನ್ ಮುನಿ ವೆಂಕಟೇಶ್, ಪೈಲ್ವಾನ್ ಸುಬ್ಬು,ಪೈಲ್ವಾನ್ ಅರುಣ್ ಕುಮಾರ್ ,ಪೈಲ್ವಾನ್ ಗಣೇಶ್ ರಾಜಘಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.