
ದೊಡ್ಡಬಳ್ಳಾಪುರ : ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಾಳೆ ನಗರದ ಡಿ ಕ್ರಾಸ್ ಬಳಿಯ ಕೇಂದ್ರ ಕಛೇರಿ ಸಮೀಪ ೬೯ನೇ ಕನ್ನಡ ರಾಜ್ಯೋತ್ಸವ ಮತ್ತು ೫೧ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ ಕಾರ್ಯಕ್ರಮವನ್ನು “ಹೆಸರಾಯಿತು ಕರ್ನಾಟಕ, ಉಸಿರಾಗಿಲಿ ಕನ್ನಡ” ಘೋಷ ವಾಕ್ಯದ ಅಡಿಯಲ್ಲಿ ಆಚರಿಸಲಾಗುತ್ತಿದೆ.
ಈ ಕುರಿತು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಮಾತನಾಡಿ ನವೆಂಬರ್ ೧ ರಂದು ಮತ್ತು ನವೆಂಬರ್ ತಿಂಗಳ ಪರ್ಯಂತ ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ. ಆರೂರು ವೆಂಕಟರಾಯರು, ವಿ.ಕೃ. ಗೋಕಾಕ್, ತು.ಸು. ಶ್ಯಾಮರಾಯರು, ಮಾ. ರಾಮಮೂರ್ತಿ ಇನ್ನು ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ರಚನೆಯಾದ ಅಖಂಡ ಕರ್ನಾಟಕ ನಾಮಕರಣವಾಗಿ ಇಂದಿಗೆ ೫೧ ವರ್ಷ ಸಂದಿದೆ. ಈ ಸುಸಂದರ್ಭದಲ್ಲಿ ಕನ್ನಡಕ್ಕಾಗಿ ಅವಿರತ ಹೋರಾಟಗಳಿಗೆ, ಹೋರಾಟಗಾರರಿಗೆ ಗೌರವ ಸಮರ್ಪಣೆಯನ್ನು ಈ ರಾಜ್ಯೋತ್ಸವದ ಮುಖೇನ ಸಲ್ಲಿಸಲಾಗುತ್ತಿದೆ ಎಂದರು.
ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ರಾ.ವಿ.ಕರವೇ ದೊಡ್ಡಬಳ್ಳಾಪುರ ತಾಲ್ಲೂಕು ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ದಿನಾಂಕ ೨೨-೧೨-೨೦೨೪ನೇ ಭಾನುವಾರ ಹಮ್ಮಿಕೊಂಡಿದ್ದು, ಕನ್ನಡ ಹಬ್ಬಕ್ಕೆ ತಾಲ್ಲೂಕಿನ ಕನ್ನಡ ಮನಸ್ಸುಗಳು, ತಾಲ್ಲೂಕಿನ ಎಲ್ಲಾ ನಾಗರೀಕ ಬಾಂಧವರು, ಕನ್ನಡ ಪರ, ರೈತ ಪರ, ವಿದ್ಯಾರ್ಥಿ ಬುತ್ರರು, ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.