
ಇದೇ ಏಪ್ರಿಲ್ 10ರ ಗುರುವಾರದಂದು ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್ (ರಿ.) ಉದ್ಘಾಟನಾ ಕಾರ್ಯಕ್ರಮವು ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮಿಗಳಾದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ಅಮೃತಹಸ್ತದಿಂದ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ .
ಅರದೇಶನಹಳ್ಳಿ, ಕುಂದಾಣ ಹೋಬಳಿಯ ಅರದೇಶನಹಳ್ಳಿಯ ಶ್ರೀ ಬಗಳಾಮುಖಿದೇವಿ ದೇವಾಲಯದ ಅಭಿವೃದ್ಧಿಗಾಗಿ ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್ (ರಿ.) ಸ್ಥಾಪಿಸಿದ್ದು, ಸದರಿ ಟ್ರಸ್ಟ್ ನ ಉದ್ಘಾಟನೆಯನ್ನು ಅಮ್ಮನವರಿಗೆ ಮಂಗಳಾರತಿ ಸಲ್ಲಿಸುವ ಮೂಲಕ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಯವರು ಏಪ್ರಿಲ್ 10 ರಂದು ಉದ್ಘಾಟಿಸಲಿದ್ದಾರೆ.
ಗುರುವಾರ ಬೆಳಗ್ಗೆ 9-00 ಗಂಟೆಗೆ ಭೂಶುದ್ದಿ, ಪಂಚಗವ್ಯ, ಸ್ವಸ್ತಿಪುಣ್ಯಾಹ, ನವಗ್ರಹಾರಾಧನೆ, ಕಳಶಸ್ಥಾಪನೆ, ದೇವಿ ಆರಾಧನೆ, ಗಣಪತಿ ಮಾದಕ ಹೋಮ, ಶ್ರೀ ಲಕ್ಷ್ಮೀ ಹೋಮ ಸಂಜೆ 3-30 ರಿಂದ 4-40 ಗಂಟೆಯೊಳಗೆ ಸಲ್ಲುವ ಶುಭ ಸಿಂಹ ಲಗ್ನದಲ್ಲಿ ಪೂರ್ಣಕುಂಭ ಮಂಗಳವಾದ್ಯಗಳೊಂದಿಗೆ ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮಿಗಳಾದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹಾಗೂ ಅಲ್ಲೂರು ಗೇಟ್ ಬಳಿಯ ಶನೇಶ್ವರ ಮಠದ ಶ್ರೀಶ್ರೀಶ್ರೀ ಸೋಮಶೇಖರಸ್ವಾಮಿಯವರನ್ನು ಸ್ವಾಗತಿಸಿ ಅವರ ನೇತೃತ್ವದಲ್ಲಿ ಶ್ರೀ ಬಗಳಾಮುಖಿದೇವಿ ಅಮ್ಮನವರಿಗೆ ಮಂಗಳಾರತಿ ಸಲ್ಲಿಸುವ ಮೂಲಕ ಸ್ವಾಮಿಯವರ ಅಮೃತಹಸ್ತದಿಂದ ನೂತನವಾಗಿ ಸ್ಥಾಪಿಸಿರುವ ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್ (ರಿ.) ಉದ್ಘಾಟನೆ ಮಾಡಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷರು ಹಾಗೂ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣಿ ತಿಳಿಸಿದ್ದಾರೆ.
ಅಲ್ಲದೇ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ 1-00 ಗಂಟೆಗೆ “ಅನ್ನಸಂತರ್ಪಣೆ” ಕಾರ್ಯಕ್ರಮ ಆಯೋಜಿಸಿದ್ದು , ನಂತರ ಭಕ್ತಿ ಗೀತೆಗಳು ಮತ್ತು ಶ್ರೀ ನಂದಿ ಡಾನ್ಸ್ ಅಕಾಡೆಮಿ ಮಕ್ಕಳಿಂದ “ಭರತ್ಯನಾಟ್ಯ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು .
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಗಳಾಮುಖಿ ದೇವಿಯ ಕೃಪೆ ಹಾಗೂ ಆಶೀರ್ವಾದ ಪಡೆದುಕೊಳ್ಳಬೇಕಾಗಿ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ತನು-ಮನ-ಧನ-ಸಹಾಯ ಮಾಡಬೇಕೆಂದು ಭಕ್ತಾಧಿಗಳಲ್ಲಿ ಆಡಳಿತ ಮಂಡಳಿ ವಿನಂತಿ ಮಾಡಿದೆ.