
ದೆಹಲಿ : ಏಪ್ರಿಲ್ 22 ರಂದು ಭಯೋತ್ಪಾಕದರು ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಅಟ್ಟಹಾಸ ಮೆರೆದಿದ್ದರು.ಬರೋಬ್ಬರಿ 26 ಪ್ರಾಣಗಳನ್ನು ಬಲಿ ಪಡೆದಿದ್ದರು. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿಯವರು ದಾಳಿಗೆ ಮೊದಲ ಪ್ರತ್ಯುತ್ತರವಾಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಪ್ರಮುಖವಾಗಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿ (ಸಿಸಿಎಸ್) ಸಭೆಯಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲದ ನೀರು ಹಂಚಿಕೆ ಒಪ್ಪಂದವಾದ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಲಾಗಿದ್ದು ಮುಂದಿನ ಸೂಚನೆ ಬರುವವರೆಗೆ ಸ್ಥಗಿತವಾಗಿರಲಿದೆ.ಎರಡೂ ದೇಶಗಳ ನಡುವಿನ ನಾಗರಿಕ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ ಅಟ್ಟಾರಿ ಚೆಕ್‌ಪೋಸ್ಟ್ ಅನ್ನು ಸದ್ಯಕ್ಕೆ ಪಾಕ್ ನಾಗರಿಕರಿಗೆ ಮುಚ್ಚಲಾಗಿದೆ. ಇದರಿಂದ ಪಾಕಿಸ್ತಾನಿಯರು ಈ ಮಾರ್ಗದ ಮೂಲಕ ಭಾರತ ಪ್ರವೇಶಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಮೋದಿ ನೇತೃತ್ವದ ಸಭೆಯಲ್ಲಿ 5 ಮಹತ್ವದ ನಿರ್ಧಾರ
*ಪಾಕ್ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸ್ಥಗಿತಕ್ಕೆ ನಿರ್ಧಾರ
*ಪಾಕಿಸ್ತಾನದ ರಾಯಭಾರಿ ಕಚೇರಿ ಬಂದ್ಗೆ ಸೂಚನೆ
*ಭಾರತ- ಪಾಕ್ ನಡುವಿನ ಅಟಾರಿ ಗಡಿ ಬಂದ್
*48 ಗಂಟೆಯಲ್ಲಿ ಪಾಕ್ ಪ್ರಜೆಗಳು ಭಾರತ ತೊರೆಯಬೇಕು
*ಪಾಕ್ನವರಿಗೆ ಭಾರತದ ವೀಸಾ ರದ್ದು- ವಿದೇಶಾಂಗ ಸಚಿವಾಲಯ
ಜೊತೆಗೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಪಾಕಿಸ್ತಾನದ ರಾಯಭಾರಿಗಳು ಒಂದು ವಾರದ ಒಳಗೆ ಭಾರತವನ್ನು ಬಿಟ್ಟು ಹೋಗಲು ತಿಳಿಸಲಾಗಿದೆ. ಇನ್ನು ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳ ಒಳಗೆ ಅಂದರೆ 2 ದಿನದ ಒಳಗೆ ತಮ್ಮ ದೇಶಕ್ಕೆ ಹಿಂದಿರುಗಲು ತಿಳಿಸಿದೆ . ಇದರ ಜೊತೆ ನೆರೆಯ ರಾಷ್ಟ್ರದವರಿಗೆ ಭಾರತದ ವೀಸಾವನ್ನು ರದ್ದು ಮಾಡಲಾಗಿದೆ. ಈ ನಿರ್ಧಾರಗಳನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.