
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರ ಕುಟುಂಬಗಳಿಗೆ (ವಾರೀಸುದಾರರಿಗೆ) ರೂ.10 ಲಕ್ಷ ಪರಿಹಾರಧನ ಘೋಷಿಸಿದ ರಾಜ್ಯ ಸರ್ಕಾರ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದ್ದು ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತಪಟ್ಟಿದ್ದಾರೆ. 47 ಮಂದಿ ಗಾಯಗೊಂಡಿದ್ದಾರೆ,ಮೃತಪಟ್ಟವರ ಕುಟುಂಬದವರ ವಾರೀಸುದಾರರಿಗೆ ರೂ.10 ಲಕ್ಷ ಪರಿಹಾರವಾಗಿ ನೀಡಲಿದ್ದೇವೆ ಹಾಗೂ ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಕಾವೇರಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಿನ್ನೆ ತಡರಾತ್ರಿವರೆಗೂ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಕ್ರಿಕೆಟ್ ಅಸೋಸಿಯೇಶನ್ ಅವರು ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಂದು ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಅವಘಡ ಸಂಭವಿಸಿದೆ , ಸದ್ಯ ಕಾಲ್ತುಳಿತಕ್ಕೆ ಒಳಗಾಗಿ ಗಾಯಗೊಂಡವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದೇವೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 15ದಿನಗಳ ಒಳಗಾಗಿ ತನಿಖೆಯ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ.ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು. ಸರ್ಕಾರ ಇದಕ್ಕಾಗಿ ಬಹಳ ದುಃಖ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.
ನಮ್ಮ ನಿರೀಕ್ಷೆಗೂ ಮೀರಿ ಜನ, ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದುರು ಸುಮಾರು 1ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ವಿಧಾನಸೌಧ ಎದುರು ನಡೆದ ಸಮಾರಂಭದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು, ದುರಂತ ನಡೆದಿಲ್ಲ.ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ಸಂಭವಿಸಿದೆ. ಯಾರೂ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕ್ರಿಕೆಟ್ ಅಸೋಸಿಯೇಶನ್ ಅಥವಾ ನಾವು ನಿರೀಕ್ಷಿಸಿರಲಿಲ್ಲ. ಕ್ರಿಕೆಟ್ ಸ್ಟೇಡಿಯಂನಲ್ಲಿ 35ಸಾವಿರ ಜನರು ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ. ಆದರೆ 2-3 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಬರುವ ನಿರೀಕ್ಷೆ ಮಾಡಿರಲಿಲ್ಲ. ಸ್ಟೇಡಿಯಂ ಸಾಮರ್ಥ್ಯದಷ್ಟು ಜನರ ನಿರೀಕ್ಷೆಯಿತ್ತು ಎಂದಿದ್ದಾರೆ.
ಗಾಯಗೊಂಡವರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ನೆರವು ಸರ್ಕಾರ ಒದಗಿಸಲಿದೆ. ಈ ವಿಷಯದಲ್ಲಿ ರಾಜಕೀಯ ನಡೆಸುವುದು ಸರಿಯಲ್ಲ. ಈ ದುರಂತ ನಡೆಯಬಾರದಿತ್ತು. ನಡೆದು ಹೋಗಿದೆ. ಇದಕ್ಕಾಗಿ ಸರ್ಕಾರ ಅತ್ಯಂತ ಹೆಚ್ಚಿನ ದುಃಖ ವ್ಯಕ್ತಪಡಿಸುತ್ತದೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ; ಅವರ ಕುಟುಂಬ ವರ್ಗ, ವಾರೀಸುದಾರರಿಗೆ, ಪೋಷಕರಿಗೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.