
ದೊಡ್ಡಬಳ್ಳಾಪುರ : ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಇಂದು ಮಧ್ಯಾಹ್ನದ ಸುಮಾರಿಗೆ 8 ವರ್ಷದ ನಾಗಚೈತನ್ಯ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.
ಮೃತ ಬಾಲಕನ ತಂದೆ ನರಸಿಂಹಲು ತಾಯಿ ಭಾಗ್ಯಮ್ಮ ಆಂಧ್ರಪ್ರದೇಶದ ಪೆನಗೊಂಡ ಬಳಿಯ ಮುದ್ದೆಪಲ್ಲಿ ಗ್ರಾಮದವರಾಗಿದ್ದು, ದೊಡ್ಡಬಳ್ಳಾಪುರದ ಕೋನಘಟ್ಟ ಗ್ರಾಮಕ್ಕೆ ಕಳೆದ ಭಾನುವಾರ ಕಟ್ಟಡ ನಿರ್ಮಾಣಕ್ಕೆಂದು ಮನೆ ಕಟ್ಟುವ ಕೆಲಸಕ್ಕೆ ಕೂಲಿಯಾಳುಗಳಾಗಿ ಬಂದಿದ್ದರು, ಜೊತೆಯಲ್ಲಿ ಇಬ್ಬರು ಮುದ್ದಾದ ಮಕ್ಕಳನ್ನು ಕರೆದುಕೊಂಡು ಬಂದಿದ್ದರು ಆದರೆ ಇಂದು ಈ ದುರ್ಘಟನೆ ಸಂಭವಿಸಿದೆ.
ಕಟ್ಟಡ ಕೆಲಸ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ದೇವರಾಜ್ ಎಂಬುವರಿಗೆ ಸೇರಿದ ತೋಟವಿದ್ದು , ಮೃತ ಬಾಲಕ ತನ್ನ ತಂಗಿ ಜೊತೆ ಶೌಚ ಕಾರ್ಯಕ್ಕೆಂದು ತೋಟಕ್ಕೆ ತೆರಳಿದ್ದಾಗ, ಕೃಷಿ ಹೊಂಡಕ್ಕೆ ಬಾಲಕ ನಾಗ ಚೈತನ್ಯ ಬಿದ್ದಿದ್ದಾನೆ, ಆತನ ತಂಗಿ ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದಲ್ಲಿಗೆ ಬಂದು ಸುದ್ದಿ ತಿಳಿಸಿದ್ದಾಳೆ. ಮೃತ ಬಾಲಕನ ತಾಯಿ ಚಿರಾಡುತ್ತಿದ್ದನ್ನು ಗಮನಿಸಿದ ಮೇಸ್ತ್ರಿ ತಮ್ಮಯ್ಯ ಎಂಬುವರು, ಕೃಷಿ ಹೊಂಡದ ಬಳಿ ಬಂದಿದ್ದಾರೆ, ಕೃಷಿ ಹೊಂಡಕ್ಕೆ ಜಿಗಿದು ಬಾಲಕನ ಪ್ರಾಣ ಕಾಪಾಡಿದ್ದಾರೆ, ತಕ್ಷಣವೇ ಬಾಲಕನನ್ನು ಕೊನಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಬಂದಿದ್ದಾರೆ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದೇಳಿ ಅಲ್ಲಿನ ಸಿಬ್ಬಂದಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಕಳಿಸಿದ್ದಾರೆ, ಆದರೆ ಆಸ್ಪತ್ರೆಗೆ ಬಂದಾಗ ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತ ಪಟ್ಟಿರುವುದನ್ನ ದೃಢಪಡಿಸಿದ್ದಾರೆ.
ಘಟನೆ ಸಂಬಂಧ ಸ್ಥಳೀಯರಾದ ವೆಂಕಟೇಶ್ ಮಾತನಾಡಿ, ಕೃಷಿ ಹೊಂಡದ ಸುತ್ತ ತಂತಿ ಬೇಲಿಯನ್ನ ಹಾಕಿಲ್ಲ, ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ, ತೋಟದ ಮಾಲೀಕನ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ, ಜೊತೆಗೆ ಕೊನಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ, ಅಂಬ್ಯೂಲೆನ್ಸ್ ನಲ್ಲಿ ದೊಡ್ಡಬಳ್ಳಾಪುರ ಆಸ್ಪತ್ರೆಗೆ ಕಳಿಸಿದ್ದರೆ ಬಾಲಕ ಬದುಕುಳಿಯುತ್ತಿದ್ದ, ಬಾಲಕ ಸಾವಿಗೆ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯವು ಕಾರಣ ಎಂದು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.
ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.