
ದೊಡ್ಡಬಳ್ಳಾಪುರ: ನಮ್ಮ ದೊಡ್ಡ ತುಮಕೂರು ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸುಮಾರು 110 ಮಕ್ಕಳಿಗೆ ಅಗತ್ಯವಿರುವ ಕಲಿಕಾ ಪರಿಕರಗಳನ್ನು ಹಾಗೂ ಟ್ರ್ಯಾಕ್ ಸೂಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ದೊಡ್ಡ ತುಮಕೂರು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ ಜಿ ಮಂಜುನಾಥ್ (LIC) ತಿಳಿಸಿದರು.
ದೊಡ್ಡತುಮಕೂರು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಕಲಿಕಾ ಸಾಮಗ್ರಿ ಹಾಗೂ ಟ್ರಾಕ್ ಶೂಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ 35 ವರ್ಷಗಳಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಗಳ ವಿತರಣೆ ಮಾಡುತ್ತಿದ್ದೇವೆ. ಈ ಬಾರಿಯ ವಿಶೇಷವೇನೆಂದರೆ ಕೆಲವು ಸ್ನೇಹಿತರು ಹಾಗೂ ದಾನಿಗಳು ಜೊತೆಗೂಡುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಗಳು,ಜಾಮೆಟ್ರಿ ಬಾಕ್ಸ್, ಡ್ರಾಯಿಂಗ್ ಪೆನ್ಸ್, ಜೊತೆಗೆ ಟ್ರ್ಯಾಕ್ ಸೂಟ್ ಸಹ ವಿತರಣೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಸಿದ್ಧಪಡಿಸಿದ ಶಾಲಾ ಸಮವಸ್ತ್ರಗಳನ್ನು ನೀಡಲಾಗುವುದು ಎಂದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸರ್ಕಾರಿ ಶಾಲೆಗಳನ್ನು ಉಳಿಸುವುದೇ ಆಗಿದೆ , ತಾಲೂಕಿನಲ್ಲಿ ಸುಮಾರು ನೂರು ವರ್ಷಗಳ ಇತಿಹಾಸವಿರುವ ನಮ್ಮ ದೊಡ್ಡ ತುಮಕೂರು ಶಾಲೆಯು ಖಾಸಗಿ ಶಾಲೆಗಳ ಪ್ರಭಾವದಿಂದ ಕಾಲಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ ನಮ್ಮ ಸರ್ಕಾರಿ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಮಕ್ಕಳನ್ನು ಉತ್ತೇಜಿಸುವ ಸಲುವಾಗಿ ಈ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಮುಂದೆ ದಾನಿಗಳ ನೆರವು ಪಡೆಯುವ ಮೂಲಕ ನಮ್ಮ ಶಾಲೆಯನ್ನು ನವೀಕರಣಗೊಳಿಸಲು ಮುಂದಾಗಲಿದ್ದೇವೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಕರಗಪ್ಪ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಹಾಗೂ ಸಲ್ಲಿಸುತ್ತಿರುವ ಪ್ರತಿಯೊಬ್ಬರು ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಸರ್ಕಾರಿ ಶಾಲೆ ಎಂದರೆ ಅಸಡ್ಡೆ ಬೇಡ , ಕೇವಲ ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಎಲ್ಲಾ ಪೋಷಕರು ಸರ್ಕಾರಿ ಶಾಲೆ ಸಿಗುವ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಅರಿಯಬೇಕಿದೆ ಎಂದರು. ವಿಶ್ವ ವಿಖ್ಯಾತರಾದ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಎಪಿಜೆ ಅಬ್ದುಲ್ ಕಲಾಂ ರವರ ಬಾಲ್ಯ ಜೀವನ ಕುರಿತು ಮಾಹಿತಿ ನೀಡಿ ಶಿಕ್ಷಣದ ಶಕ್ತಿಯನ್ನು ಮಕ್ಕಳಿಗೆ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾದ ಎಮ್ ಎಸ್ ರಾಜಶೇಖರ್ ಮಾತನಾಡಿ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಪೋಷಕರ ಇಂಗ್ಲಿಷ್ ವ್ಯಾಮೋಹವೇ ಮುಖ್ಯ ಕಾರಣವಾಗಿದೆ, ಇದನ್ನು ಅರಿತಿರುವ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿದೆ ಖಾಸಗಿ ಶಾಲೆಗಳಲ್ಲಿ ಹಣಕೊಟ್ಟು ಪಡೆಯುವ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಅಲ್ಲದೆ ಪ್ರತಿ ವರ್ಷ ಪ್ರತಿ ಮಗುವಿಗೆ ಉಚಿತ ಸಮವಸ್ತ್ರ ಉಚಿತ ಪೋಷಕಾಂಶಯುಕ್ತ ಆಹಾರ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪೋಷಕರು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಬೇಕಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಕರಗಪ್ಪ,ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾದ ಎಮ್ ಎಸ್ ರಾಜಶೇಖರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಕುಮಾರ್,ಕಾರ್ಯಕ್ರಮದ ಆಯೋಜಕರಾದ ಟಿ.ಜಿ.ಮಂಜನಾಥ್ ಎಲ್ ಐ ಸಿ,ಮುಖಂಡರಾದ ದೀಪು, ಶ್ರೀರಾಮ್, ರಘು,ಚಂದ್ರಶೇಖರ್, ಚಿಕ್ಕಣ್ಣ,ಎಲೆಕ್ಟ್ರಿಕ್ ಆನಂದ್,ಗ್ರಾಮ ಪಂಚಾಯತಿ ಸದಸ್ಯ ಲೋಕೇಶ್, ಲಕ್ಷ್ಮಣ್,ದೊಡ್ಡತುಮಕೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಸತ್ಯವತಿ, ಕುಸುಮಾವತಿ, ಜ್ಯೋತಿ ಶಿಕ್ಷಕರಾದ ಶಬೀನಾಬಾನು,ನೇತ್ರಾವತಿ ಮತ್ತು ಸಹಶಿಕ್ಷಕರು, ವಿ ಎಸ್ ಎಸ್ ಏನ್ ಮಾಜಿ ಅಧ್ಯಕ್ಷ ನಾಗರಾಜ್,ಅಧ್ಯಕ್ಷರಾದ ಟಿ ಎ ಪ್ರಕಾಶ್ ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು