
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ನಟ ಪ್ರಥಮ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭೀಮ್ ಸೇನೆಯ ಕಾರ್ಯಕರ್ತರು ನಟ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ ಘಟನೆ ಗುರುವಾರ ಸಂಜೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ಎದುರು ನಡೆದಿದೆ.
ತನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಟ ಪ್ರಥಮ್ ದೂರು ದಾಖಲು ಮಾಡಿದ್ದು, ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಸ್ಥಳ ಮಹಜರ್ ಮತ್ತು ಹೇಳಿಕೆ ನೀಡಿ ವಾಪಸ್ ಹೋಗುವ ವೇಳೆ ಠಾಣೆಯ ಮುಂದೆ ಜಮಾಯಿಸಿದ ಕರ್ನಾಟಕ ಭೀಮ ಸೇನೆಯ ಕಾರ್ಯಕರ್ತರು ಪ್ರಥಮ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಪ್ರಥಮ್ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಮುಂದಾದರು. ಆದ್ರೆ ಅಷ್ಟರಲ್ಲಿ ಅವರ ಮುಖಕ್ಕೆ ಕಾರ್ಯಕರ್ತರೊಬ್ಬರು ಮಸಿ ಬಳಿಯಲು ಮುಂದಾದರು. ತಕ್ಷಣ ಪೊಲೀಸ್ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಜುಲೈ 29 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಮಯದಲ್ಲಿ ಪ್ರಥಮ್ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಕರ್ನಾಟಕ ಭೀಮ ಸೇನೆ ಕಾರ್ಯಕರ್ತರು, ಪೊಲೀಸ್ ಠಾಣೆಯ ಅವರಣದಲ್ಲಿಯೇ ಪ್ರಥಮ್ ಅವರಿಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಪಟ್ಟುಹಿಡಿದರು.
ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ನಟ ಪ್ರಥಮ್ ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಅಂಬೇಡ್ಕರ್ ಅವರ ವಿಚಾರವಾಗಿ ಮಾತನಾಡಿಲ್ಲ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಕೇವಲ ನಾನು ಮಾತನಾಡಿರುವ ಕೆಲವು ತುಣುಕು ನೋಡಿ ಅಂಬೇಡ್ಕರ್ ಅಭಿಮಾನಿಗಳು ಈ ನಿರ್ಧಾರಕ್ಕೆ ಬರುವುದು ತಪ್ಪು ನಾನು ಮಾತಾಡಿರುವ ಸಂಪೂರ್ಣ ವಿಡಿಯೋ ನೋಡಿ ಆಗ ನನ್ನ ಮಾತಿನ ಅರ್ಥವಾಗುತ್ತದೆ. ನನ್ನ ಮಾತಿನಿಂದ ಅಂಬೇಡ್ಕರ್ ಅನುಯಾಯಿಗಳಿಗೆ ಬೇಸರವಾಗಿದ್ದರೆ ನಾನು ಬೇಷರತ್ ಕ್ಷಮೆ ಯಾಚಿಸುತ್ತೇನೆ . ಇನ್ನು ಮುಂದೆ ನಾನು ಸಿನಿಮಾರಂಗದಿಂದ ದೂರ ಉಳಿಯಲಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ .