
ದೊಡ್ಡಬಳ್ಳಾಪುರ : ವಿದ್ಯಾರ್ಥಿಗಳಿಗೆ ಸಂಗೀತವು ಶೈಕ್ಷಣಿಕ ಸಾಧನೆ, ಆರೋಗ್ಯ, ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸಲು ಸಹಕಾರಿ ಆಗುತ್ತದೆ ಎಂದು ಕಲಾವಿದ ಡಾ.ದೇವನಹಳ್ಳಿ ದೇವರಾಜು ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆರು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಗೀತವು ಬಲವಾದ ಚಿಕಿತ್ಸಾ ಸಾಧನವಾಗಿದೆ. ಯುವಜನತೆಗೆ ಸುಗಮಸಂಗೀತ, ಜನಪದ ಸಂಗೀತ, ರಂಗ ಸಂಗೀತ ಮುಂತಾದವುಗಳನ್ನು ಪರಿಚಯಿಸುವುದರ ಜೊತೆಗೆ ತರಬೇತಿಯನ್ನು ನೀಡುವುದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೆ ಪ್ರಯೋಜನಕಾರಿ ಆಗುತ್ತದೆ ಎಂದರು.
ಕಲೆ ಮತ್ತು ಸಂಗೀತ ತರಬೇತಿಯು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ, ಕಲ್ಪನಾತ್ಮಕ, ಭಾವನಾತ್ಮಕ ಚಿಂತನೆಗಳ ಅಭಿವ್ಯಕ್ತಿಗೊಳಿಸುತ್ತದೆ. ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕಗಳು, ಪರೀಕ್ಷೆಗಳು ಮತ್ತು ಉತ್ತಮ ಅಂಕಗಳನ್ನು ಪಡೆಯುವ ಉದ್ದೇಶಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳ ಮುಂದಿನ ಜೀವನದ ಯಶಸ್ಸಿಗಾಗಿ ವಿವಿಧ ಕೌಶಲ್ಯ ಮತ್ತು ಜ್ಞಾನವನ್ನು ಹೊಂದುವ ಸಾಮರ್ಥ್ಯವನ್ನು ಕಲಿಸಬೇಕೆಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ಮತ್ತು ಯುವಜನರಿಗಾಗಿ ಚಿಗುರು, ಯುವಸೌರಭ, ಸಾಂಸ್ಕೃತಿಕ ಸೌರಭ, ಸುಗ್ಗಿಹುಗ್ಗಿ, ಮತ್ತು ಮಹಿಳಾ ಸಾಂಸ್ಕೃತಿಕ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಲಾವಿದ ಅರುಣ್ ವಿಚಿ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರಾಧಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.