
ತುಂಬು ಗರ್ಭಿಣಿ ಸುಷ್ಮಾ ಮಹೇಶ್ ( 24ವರ್ಷ) ವೈದ್ಯರ ನಿರ್ಲಕ್ಷದಿಂದಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಸಂಭವಿಸಿದೆ.
ಸಾರ್ವಜನಿಕ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದಾಗಿ ಗರ್ಭಿಣಿ ಸುಷ್ಮಾ ಮಹೇಶ್ (24ವರ್ಷ) ಸಾವನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ .
ಇನ್ನೇನು ಮನೆಗೆ ಹೊಸ ಅತಿಥಿ ಬರುತ್ತಾನೆ ಎಂದು ಕಾಯುತ್ತಿದ್ದ ಕುಟುಂಬಸ್ಥರು ತಾಯಿ ಮಗು ಇಬ್ಬರನ್ನು ಕಳೆದು ಕೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆಸ್ಪತ್ರೆ ವೈದ್ಯರಿಗೆ ಇಡೀ ಶಾಪ ಹಾಕುತ್ತಿದ್ದಾರೆ.
ನೆನ್ನೆ ಆಸ್ಪತ್ರೆಗೆ ಬಂದಿದ್ದ ಸುಷ್ಮಾ ಮಹೇಶ್ರನ್ನು ಕೇವಲ ಒಂದು ಬಿಪಿ ಮಾತ್ರೆ ಕೊಟ್ಟು ಏನು ಆಗುವುದಿಲ್ಲ ಮನೆಗೆ ಹೋಗಿ ಎಂದು ಕಳಿಸಿದ್ದರು ನನಗೆ ನೋವು ತಡೆಯಲಾಗುತ್ತಿಲ್ಲ ನನ್ನನ್ನು ಅಡ್ಮಿಟ್ ಮಾಡಿಕೊಳ್ಳಿ ಎಂದು ಬೇಡಿಕೊಂಡರು ವೈದ್ಯರು ಏನು ಆಗುವುದಿಲ್ಲ ನೋವು ತಡೆಯಬೇಕು ಎಂದು ಹೇಳಿ ಕಳಿಸಿದ್ದರು, ಇಂದು ಮುಂಜಾನೆ ಸಮಯದಲ್ಲಿ ನೋವು ತಾಳಲಾರದೆ ಸುಷ್ಮಾ ರನ್ನು ನಾವು ಆಸ್ಪತ್ರೆಗೆ ಕರೆತಂದಾಗ ಯಾವುದೇ ವೈದ್ಯರು ಇರಲಿಲ್ಲ ಸರಿಯಾದ ಚಿಕಿತ್ಸೆ ನೀಡಿದ್ದರೆ ಸುಷ್ಮಾ ಮತ್ತು ಮಗು ಜೀವಂತವಾಗಿರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಶಾ ಕಾರ್ಯಕರ್ತೆ ಪ್ರೇಮ ಕುಮಾರಿ ಮಾತನಾಡಿ ನೆನ್ನೆ ಆಸ್ಪತ್ರೆಗೆ ಬಂದಾಗ ಬಿ ಪಿ ಹೆಚ್ಚಾಗಿತ್ತು ಆಗ ವೈದ್ಯರು ಬಿಪಿ ಮಾತ್ರೆ ಕೊಟ್ಟು ಪುಷ್ಪರನ್ನು ಮನೆಗೆ ಕಳಿಸಿಕೊಟ್ಟಿದ್ದರು . ಇಂದು ಮುಂಜಾನೆ ಈ ಅವಘಡ ಸಂಭಾವಿಸಿದೆ ಎಂದಿದ್ದಾರೆ
ಮೃತರ ಸಹೋದರ ಲೋಕೇಶ್ ಮಾತನಾಡಿ ನಿನ್ನೆ ನಾವು ಆಸ್ಪತ್ರೆಗೆ ಬಂದಾಗ ವೈದ್ಯರ ಬಳಿ ನನ್ನ ತಂಗಿಯನ್ನು ಅಡ್ಮಿಟ್ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದೆವು. ಆದರೆ ಏನು ಆಗುವುದಿಲ್ಲ ನೋವು ತಡೆಯಬೇಕು ಎಂದು ಹೇಳಿ ಮನೆಗೆ ಮರಳಿ ಕಳಿಸಿದ್ದರು ಇಲ್ಲಿ ಬರುವ ರೋಗಿಗಳಿಗೆ ವೈದ್ಯರಿಂದ ಸರಿಯಾದ ಸ್ಪಂದನೆ ಸಿಗುವುದಿಲ್ಲ , ವೈದ್ಯರ ನಿರ್ಲಕ್ಷದಿಂದಾಗಿ ಇಂದು ನನ್ನ ತಂಗಿ ಮತ್ತು ಮಗು ಸಾವನ್ನಪ್ಪಿದೆ , ನಿರ್ಲಕ್ಷ ತೋರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಸಮಾಜ ಸೇವಕರಾದ ಪುಟ್ಟರಾಜು ಗರ್ಭಿಣಿ ಸಾವನ್ನಪ್ಪಿ ಸುಮಾರು ಗಂಟೆಗಳು ಕಳೆದರೂ ಕೂಡ ಇದುವರೆಗೂ ಯಾರೊಬ್ಬ ವೈದ್ಯರು ಕೂಡ ಈ ಕುರಿತು ಮಾತನಾಡಲು ಬಂದಿಲ್ಲ , ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಗೋಳಾಡುತ್ತಿದ್ದರು ಆಸ್ಪತ್ರೆಯ ಯಾವುದೇ ಸಿಬ್ಬಂದಿ ಸ್ಪಂದಿಸುತ್ತಿಲ್ಲ , ಇದು ಹೆಸರಿಗಷ್ಟೇ ಸಾರ್ವಜನಿಕ ಆಸ್ಪತ್ರೆ , ಈ ರೀತಿಯ ವೈದ್ಯರ ನಿರ್ಲಕ್ಷದಿಂದಾಗಿಯೇ ಸಾರ್ವಜನಿಕರು ಖಾಸಗಿ ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೀಗಾದರೆ ಬಡ ರೋಗಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ತಾಲೂಕಿನ ತಾಯಿ ಮತ್ತು ಮಗು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಮಾಡಬೇಕೆಂಬ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಇರುವ ತಾಯಿ ಮತ್ತು ಮಗು ಆಸ್ಪತ್ರೆಗೆ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದೆ ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಮಾಡಿದರೆ ಅಲ್ಪ ಸಿಬ್ಬಂದಿ ವರ್ಗವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.