
ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಸರ್ಕಾರಿ ನಿವೇಶನಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಬಚ್ಚಹಳ್ಳಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನೆಡೆಸಿದರು.
ಈ ಸಂದರ್ಭದಲ್ಲಿ ಹಾಡೋನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಬಚ್ಚಹಳ್ಳಿ ನಾಗರಾಜ್ ಮಾತನಾಡಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ದೊಡ್ಡಬಳ್ಳಾಪುರ ತಾಲ್ಲೂಕಿನ, ತೂಬಗೆರೆ ಹೋಬಳಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚ್ಚಹಳ್ಳಿ ಗ್ರಾಮದ ಸರ್ವೆ ನಂ 10ರಲ್ಲಿ 5:00 ಎಕರೆ ಭೂಮಿಯನ್ನು ಆಶ್ರಯ ನಿವೇಶನಗಳಿಗಾಗಿ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ತಯಾರಿ ನಡೆಸುತ್ತಿದ್ದು, ಈ ಹಿಂದೆ ಸರ್ಕಾರದಿಂದ ಅಲ್ಪಜಾಗವನ್ನು ಮಂಜೂರು ಪಡೆದಿರುವ ಕುಟುಂಬಗಳು ಫಲಾನುಭವಿ ಆಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ ಹತ್ತಾರು ಎಕರೆ ಭೂಮಿ ಹೊಂದಿರುವ ಆರ್ಥಿಕವಾಗಿ ಸಬಲರಾಗಿರುವ ಹಲವು ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಮುಂದಾಗಿರುವುದು ವಿಷಾದನೀಯ ಸಂಗತಿಯಾಗಿದೆ .
ಹಾಕ್ಕೋತ್ತಾಯಗಳೇನು…???
*ನೈಜ ಫಲಾನುಭವಿಗಳ ಆಯ್ಕೆಗಾಗಿ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು
*ಈ ಸಮಿತಿಯು ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಬೇಕು
*ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಅನುಮೋದನೆಗೊಂಡಿರುವ ಫಲಾನುಭವಿಗಳ ಪಟ್ಟಿ ಮತ್ತು ಈಗ ಆನ್ ಲೈನ್ ನಲ್ಲಿರುವ ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಎರಡನ್ನೂ ಪರಿಷ್ಕರಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಬೇಕು
* ಸಮಿತಿಯು ಪ್ರತಿ ಮನೆಯ ಸಮೀಕ್ಷೆ ಮಾಡಿ. ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು
*ಈಗಿರುವ 20X30 ಅಳತೆಗೆ ಬದಲಾಗಿ 20×60 ಅಳತೆಯ ನಿವೇಶನಗಳನ್ನು ನೀಡಬೇಕು.
ನಾವುಗಳು ಕೃಷಿ ಕೂಲಿ ಕಾರ್ಮಿಕರಾಗಿರುವುದರಿಂದ ನಮ್ಮ ಜೀವನ ನಿರ್ವಹಣೆಗೆ ಒಂದು ಹಸು, ಕುರಿ, ಕೋಳಿ ಸಾಕಣೆ ಮಾಡಿಕೊಂಡಿರುತ್ತೇವೆ ಈಗ ಗುರುತಿಸಿ ನೀಡಿರುವ ನಿವೇಶನಗಳು 20*30 ಅಳತೆಯದ್ದಾಗಿದ್ದು ಈ ಅಳತೆಯಲ್ಲಿ ನಾವುಗಳು ಮನೆಯನ್ನು ಎಲ್ಲಿ ಕಟ್ಟಿಕೊಳ್ಳಬೇಕು ಕೊಟ್ಟಿಗೆಯನ್ನು ಎಲ್ಲಿ ಕಟ್ಟಿಕೊಳ್ಳಬೇಕು ಹಾಗಿರುವುದರಿಂದ 20X30 ಅಳತೆಯ ಬದಲಾಗಿ 20*60 ಅಳತೆ ನಿವೇಶನಗಳನ್ನು ಹಂಚಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಈ ಕುರಿತು ನಮ್ಮ ಗ್ರಾಮದ ಪ್ರತಿ ಮನೆಮನೆಯನ್ನು ಸಮೀಕ್ಷೆಗೆ ಒಳಪಡಿಸಬೇಕು. ಪ್ರತಿ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ನೈಜ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾಗ್ರತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ನಾಗರಾಜು ಬಚ್ಚಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್,ಮಂಜುಳಮ್ಮ,ಗೀತಾ ಬಾಯಿ,ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ,ರೈತ ಸಂಘದ ಮುಖಂಡ ಸತೀಶ್ ಗೊಲ್ಲಹಳ್ಳಿ,ಮುನಿಯಪ್ಪ,ಹರೀಶ್ ನಾಯ್ಕ, ಮಂಜುನಾಯ್ಕ,ವಿಜಿ ನಾಯ್ಕ,ಹನುಮಂತೇಗೌಡ ಮತ್ತು ಬಚ್ಚಹಳ್ಳಿ ಗ್ರಾಮದ ಮಹಿಳೆಯರು ಮತ್ತು ಮುಖಂಡರು ಹಾಜರಿದ್ದರು