
ದೊಡ್ಡಬಳ್ಳಾಪುರ : ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂತುಹಾಕಲಾಗಿದೆ ಎಂಬ ಪ್ರಕರಣ ಕುರಿತು ವರದಿ ಮಾಡಲು ಹೋಗಿದ್ದ ನಾಲ್ವರು ಯೂಟ್ಯೂಬರ್‌ಗಳ ಮೇಲೆ ಬುಧವಾರ ಧರ್ಮಸ್ಥಳದ ಕೆಲ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಕಾರ್ಮಿಕ ಮುಖಂಡ ಪಿ ಎ ವೆಂಕಟೇಶ್ ಅಗ್ರಹಿಸಿದರು.
ಇಂದು ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ತಾಲ್ಲೂಕು ಕನ್ನಡ ಪಕ್ಷ, ಕೆ.ಆರ್.ಎಸ್ ಸಮಿತಿ,ಸಿಐಟಿಯು ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕು ಸ್ವತಂತ್ರ ಬರಹಗಾರರು, ಹಾಗೂ ಪತ್ರಕರ್ತರು ಪ್ರತಿಭಟನೆ ನೆಡೆಸಿದರು ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂತುಹಾಕಲಾಗಿದ್ದ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಧರ್ಮಸ್ಥಳದ ಹಲವು ಪ್ರದೇಶಗಳಲ್ಲಿ ದೂರುದಾರ ಗುರುತಿಸಿರುವ ಸ್ಥಳಗಳಲ್ಲಿ ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ, ಹಲವಾರು ಕಳೇಬರಗಳು ಎಸ್‌ಐಟಿ ಅಧಿಕಾರಿಗಳಿಗೆ ದೊರೆತಿವೆ. ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಹಲವರನ್ನು ಹತ್ಯೆ ಮಾಡಿ, ರಹಸ್ಯವಾಗಿ ಹೂತುಹಾಕಲಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿವೆ.
ಬೇಡಿಕೆಗಳು:
*ಧರ್ಮಸ್ಥಳದ ನಡೆದಿದೆ ಎನ್ನಲಾದ ಶವ ಹೂತಿಟ್ಟ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು.
*ಪಕ್ಷಪಾತವಿಲ್ಲದೆ ನಿರ್ಭೀತಿಯಿಂದ ವರದಿ ಮಾಡುತ್ತಿರುವ ಎಲ್ಲಾ ಸ್ವತಂತ್ರ ಪತ್ರಕರ್ತರಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಬೇಕು.
*ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು.
ದೂರುದಾರ ಹೇಳಿರುವಂತೆ ಹೂತುಹಾಕಲಾಗಿರುವ ಮೃತದೇಹಗಳಲ್ಲಿ ಹೆಚ್ಚಿನ ಶವಗಳು ಮಹಿಳೆಯರು ಮತ್ತು ಹೆಣ್ಣು ಮಕ್ಕಳದ್ದಾಗಿವೆ. ಹೀಗಾಗಿ, ಸೌಜನ್ಯ ಪ್ರಕರಣ ಮತ್ತು ಅನನ್ಯ ಭಟ್ ಪ್ರಕರಣಗಳನ್ನು ಗಮನಿಸಿದರೆ, ಹೂತುಹಾಕಲಾಗಿರುವ ಮಹಿಳೆಯರನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂಬ ಅನುಮಾನ ರಾಜ್ಯಾದ್ಯಂತ ವ್ಯಕ್ತವಾಗುತ್ತಿದೆ.
ಇಂತಹ ಗಂಭೀರ ಪ್ರಕರಣದ ತನಿಖೆಯ ಕುರಿತು ವರದಿಗೆ ಹೋಗಿದ್ದ ನಾಲ್ವರು ಯೂಟ್ಯೂಬರ್‌ಗಳಾದ ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಮತ್ತೋರ್ವನ ಮೇಲೆ ಬುಧವಾರ ಧರ್ಮಸ್ಥಳದ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪ್ರಕರಣದ ವರದಿ ಮಾಡದಂತೆ ತಡೆಯಲು ದೌರ್ಜನ್ಯ ಎಸಗಿದ್ದಾರೆ. ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಯೂಟ್ಯೂಬ್ ವರದಿಗಾರರ ಮೇಲೆ ಹಲ್ಲೆ ನಡೆಸಿರುತ್ತಾರೆ.
ಗೂಂಡಾಗಳು ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬವೊಂದರ ಕುಮ್ಮಕ್ಕಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ, ಬುಧವಾರ ಸಂಜೆ ವೈರಲ್ ಆದ ವಿಡಿಯೋದಲ್ಲಿ ಆ ಪ್ರತಿಷ್ಠಿತ ಕುಟುಂಬದ ಬೆಂಬಲಿಗರ ದಾಂಧಲೆಯನ್ನು ತಡೆಯಲು ಪೊಲೀಸರು ಯತ್ನಿಸಿದ್ದು ಈ ವೇಳೆ, ಆ ದಾಂಧಲೆಕೋರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿರುವುದು ಕಂಡುಬಂದಿದೆ ಎಂದರು.
ಆ ಗೂಂಡಾಗಳ ದಾಂಧಲೆ ಮತ್ತು ಹಲ್ಲೆಗಳು ಪ್ರಕರಣದ ತನಿಖೆಗೆ ಅಡ್ಡಿಯುಂಟು ಮಾಡುವ ಉದ್ದೇಶದಿಂದಲೇ ನಡೆದಿದೆ. ಗೂಂಡಾಗಳನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ದಾಂದಲೆ ಮತ್ತು ಹಲ್ಲೆಗೆ ಗೊಂದಲಗಳಿಗೆ ಕುಮ್ಮಕ್ಕು ನೀಡಿದವರು ಯಾರು ಎಂಬುದನ್ನು ತನಿಖೆ ಮಾಡಿ ಅವರನ್ನೂ ಬಂಧಿಸಬೇಕು.
23 ವರ್ಷಗಳ ಹಿಂದೆ ವಿದ್ಯಾರ್ಥಿನಿ ಅನನ್ಯ ಭಟ್, 13 ವರ್ಷಗಳ ಹಿಂದೆ ಯುವತಿ ಸೌಜನ್ಯ ಸೇರಿದಂತೆ ಹಲವಾರು ಹೆಣ್ಣು ಮಕ್ಕಳು ಧರ್ಮಸ್ಥಳದಲ್ಲಿ ಅಪಹರಣ, ಅತ್ಯಾಚಾರ ಹಾಗೂ ಕೊಲೆಗೆ ಬಲಿಯಾಗಿದ್ದಾರೆ. ಈ ಕೃತ್ಯಗಳ ಹಿಂದೆ ಧರ್ಮಸ್ಥಳದ ಸಿರಿವಂತ ಕುಟುಂಬದ ಕೈವಾಡವಿದೆ ಎಂಬ ಗಂಭೀರ ಆರೋಪಗಳು ದಶಕಗಳಿಂದ ಕೇಳಿಬರುತ್ತಿವೆ. ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಬೇಕು. ಆದಷ್ಟು ಬೇಗ ಅಪರಾಧಿಗಳನ್ನು ಬಂಧಿಸಿ, ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು. ಎಂದು ಆಗ್ರಹಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಕಾರ್ಮಿಕ ಮುಖಂಡ ರೇಣುಕಾರಾಧ್ಯ, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ಕೆಆರ್‌ಎಸ್ ಸಮಿತಿಯ ಮುಖಂಡ ಶಿವಶಂಕರ್, ಮಾನವ ಬಂಧುತ್ವ ವೇದಿಕೆಯ ವೆಂಕಟೇಶ್, ಪತ್ರಕರ್ತರಾದ ರಾಜುಸಣ್ಣಕ್ಕಿ, ಗುರುಪ್ರಸಾ್, ದಾಳಿಗಪ್ಪ, ದಲಿತ ಮುಖಂಡ ಮಂಜುನಾಥ್, ಕನ್ನಡಪರ ಹೋರಾಟಗಾರ ತೂಬಗೆರೆ ಷರೀಫ್, ಎಸ್‌ಡಿಯುಆರ್ ಸಂಘಟನೆಯ ಸಾಧಿಕ್ ಮುಂತಾದವರು ಉಪಸ್ಥಿತರಿದ್ದರು.