
ದೊಡ್ಡಬಳ್ಳಾಪುರ : ಸೋಮೇಶ್ವರ ಕುಂಟೆ ಒತ್ತುವರಿಯನ್ನು ತೆರವುಗೊಳಿಸಿ ಕುಂಟೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಸಮಯ ವ್ಯರ್ಥ ಮಾಡುತ್ತಿರುವುದನ್ನು ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೆ ಗೌರವ ಸಲ್ಲಿಸಿದ ನಂತರ ಕಪ್ಪು ಪಟ್ಟಿ ಧರಿಸಿ ಹೋರಾಟಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಪರ ಸಂಘಟನೆಗಳ ಒಕ್ಕೂಟ)ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ದೊಡ್ಡಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ ಗಂಗಾಧರಪುರ ಗ್ರಾಮದ ಸರ್ವೆ ನಂಬರ್ 17 ರ 2ಎಕರೆ 04ಗುಂಟೆ ಜಾಗವಿದ್ದು, ಇದು ಸರ್ಕಾರಿ ಕುಂಟೆ, ಸೋಮೇಶ್ವರ ಕುಂಟೆ ಎಂದು ದಾಖಲಾತಿಗಳಲ್ಲಿ ನಮೂದಾಗಿರುತ್ತದೆ. ಈ ಸದರಿ ಜಾಗವು ಸರ್ಕಾರಿ ಕುಂಟೆಯ ಜಾಗವಾಗಿದ್ದು, ಇದು ಸ್ವಯಂಭುವೇಶ್ವರ ದೇವಸ್ಥಾನದ ಹತ್ತಿರವಿದೆ. ಆದರೆ ಪಹಣಿಯಲ್ಲಿ 0.00 ಎಂದು ನಮೂದು ಆಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ.
ಈ ಹಿಂದೆ ಇದೇ ಸದರಿ ಜಾಗದಲ್ಲಿ ಬಡವರೊಬ್ಬರು ಮನೆ ಕಟ್ಟಿದ್ದಾರೆಂದು, ಅಕ್ರಮವೆಂದು ಆ ಮನೆಯನ್ನು ಕೆಡವಿದ್ದು ಇದೆ. ಆದರೆ ಇದೀಗ ಸದರಿ ಜಾಗದ ವಿಸ್ತೀರ್ಣ 2.04ಎಕರ ಬದಲಿಗೆ 0.00 ಎಂದು ನಮೂದಾಗಿರುವುದನ್ನು ನಮ್ಮ ಸಂಘಟನೆ ಖಂಡಿಸಿತ್ತು. ಸದರಿ ಜಾಗವನ್ನು ಕುಂಟೆಯಾಗಿಯೇ ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ಯಾವುದಾದರು ಇತರ ಖಾತೆಗಳು ಇದ್ದಲ್ಲಿ ಅವುಗಳನ್ನು ರದ್ದು ಮಾಡಬೇಕೆಂದು ದಿನಾಂಕ: 25-03-2025 ರಂದು ನಮ್ಮ ಸಂಘಟನೆಯಿಂದ ಅರ್ಜಿಯನ್ನು ನಾವು ಈಗಾಗಲೇ ಮಾನ್ಯ ಶಾಸಕರಿಗೆ, ಮಾನ್ಯ ಜಿಲ್ಲಾಧಿಕಾರಿಗಳಿಗೆ, ಮಾನ್ಯ ತಹಶೀಲ್ದಾರ್ ರವರಿಗೆ, ಮಾನ್ಯ ಉಪವಿಭಾಗಾಧಿಕಾರಿಗಳಿಗೆ, ಮಾನ್ಯ ಪೌರಾಯುಕ್ತರಿಗೆ, ಹಾಗೂ ಮಾನ್ಯ ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಮನವಿಯನ್ನು ಸಲ್ಲಿಸಿದ್ದೆವೆ.
ನಮ್ಮ ಸಂಘಟನೆಯ ಮನವಿಯ ಮೇರೆಗೆ ಇದೀಗ ಸರ್ಕಾರದಿಂದ ಸರ್ವೇ ನಡೆಸಿದ್ದು, ನಕಾಶೆಯಲ್ಲಿ ಭೂಗಳ್ಳರ ಹಸ್ತಕ್ಷೇಪ ದಿಂದ ಸದರಿ ಜಾಗದ ಒಂದಷ್ಟು ಭಾಗ ಒತ್ತುವರಿಯಾಗಿರುವುದು ಕಂಡುಬಂದಿದೆ. ಒತ್ತುವರಿಯನ್ನು ತೆರವುಗೊಳಿಸಿ ಕುಂಟೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಸಮಯ ವ್ಯರ್ಥ ಮಾಡುತ್ತಿದ್ದು ಇದನ್ನು ನಮ್ಮ ಸಂಘಟನೆ ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೆ ಗೌರವ ಸಲ್ಲಿಸಿದ ನಂತರ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.