
ಮನೆಯ ಬಾಗಿಲು ಹಾಕಿಕೊಂಡು ಮಹಿಳೆಯೋರ್ವರು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗುತ್ತಿದ್ದ ವೇಳೆ
ಸಿನಿಮೀಯ ಶೈಲಿಯಲ್ಲಿ ಇ.ಆರ್.ಎಸ್.ಎಸ್-112 ಸಿಬ್ಬಂದಿಗಳಾದ ಶಿವರಾಜು ಮತ್ತು ಅಭಿಷೇಕ್ ಬಾಗಿಲು ಒಡೆದು ನೇಣಿನ ಕುಣಿಕೆಯಿಂದ ಇಳಿಸಿ ಮಹಿಳೆಯ ಜೀವ ಉಳಿಸಿರುವ ಘಟನೆ ಜನವರಿ ೨೩ ರಂದು ನಡೆದಿದೆ. ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ತುರ್ತುಪರಿಸ್ಥಿತಿಯಲ್ಲಿ ಕರ್ತವ್ಯಪ್ರಜ್ಞೆ ಮೆರೆದ ಸಿಬ್ಬಂದಿಗಳನ್ನು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿ ಪ್ರಶಂಸಾ ಪತ್ರವನ್ನು ಬೆಂಗಳೂರು ಕಚೇರಿಯಲ್ಲಿ ಬುಧವಾರ ವಿತರಣೆ ಮಾಡಿದ್ದಾರೆ.
ಘಟನೆಯ ವಿವರ:
ಜನವರಿ ೨೩ ರಂದು ಮೆಳೆಕೋಟೆ ಕ್ರಾಸ್ ಗ್ರಾಮದ ಮಹಿಳೆ ಭಾಗ್ಯಲಕ್ಷ್ಮಿ ಎಂಬಾಕೆ ಮನೆಯಲ್ಲಿ ಅತ್ತೆ, ನಾದಿನಿಯೊಂದಿಗೆ ಜಗಳ ನಡೆದಿದೆ. ತನ್ನ ಗಂಡನಿಲ್ಲದ ಸಮಯದಲ್ಲಿ ಭಾಗ್ಯಲಕ್ಷ್ಮಿಯ ಅತ್ತೆ ಮತ್ತು ನಾದಿನಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪುಟ್ಟಮಕ್ಕಳ ಮುಂದೆಯೇ ಹಲ್ಲೆ ಮಾಡಿದ್ದಾರೆ. ಈ ವೇಳೆ ತೀವ್ರವಾಗಿ ಮನನೊಂದ ಭಾಗ್ಯಲಕ್ಷ್ಮಿ ಮನೆಯಿಂದ ಹೊರಬಂದು, ೧೧೨ ಪೊಲೀಸರಿಗೆ ಅತ್ತೆ, ನಾದಿನಿಯ ಕಿರುಕುಳದ ಬಗ್ಗೆಯ ಕರೆ ಮಾಡಿ ತಿಳಿಸಿದ್ದಾಳೆ. ಎಚ್ಚೆತ್ತ ೧೧೨ ಸಿಬ್ಬಂದಿಗಳು ಮೆಳೆಕೋಟೆ ಕ್ರಾಸ್ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲಾಗಲೇ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಆಕೆ ಕೊನೆಯ ಬಾರಿ ಆಕೆ ಕರೆ ಮಾಡಿದ್ದ ಸ್ಥಳವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ವೇಳೆಗೆ ಊರ ಆಚೆಗಿನ ಪಾಳುಬಿದ್ದ ಮನೆಯೊಂದರಲ್ಲಿ ಇಬ್ಬರು ಕಂದಮ್ಮಗಳ ಮುಂದೆಯೇ ನೇಣುಬಿಗಿದುಕೊಳ್ಳಲು ಯತ್ನಿಸಿದ್ದಾಳೆ. ಮಕ್ಕಳ ಚೀರಾಟದಿಂದ ಮನೆಯ ಕಿಟಕಿಯನ್ನು ಇಣುಕಿ ನೋಡಿದ್ದಾರೆ. ಮಹಿಳೆ ಸಾವುಬುದುಕಿನ ಮಧ್ಯೆ ಇರುವುದನ್ನ ಕಂಡು ಬಾಗಿಲು ಒಡೆದು ಒಳ ನುಗ್ಗಿ ಮಹಿಳೆಯನ್ನ ನೇಣಿನ ಕುಣಿಕೆಯಿಂದ ಪೊಲೀಸರು ರಕ್ಷಿಸಿದ್ದಾರೆ.