
ದೊಡ್ಡಬಳ್ಳಾಪುರ :ಮದ್ಯದಂಗಡಿ ಪ್ರಾರಂಭಿಸಲಾಗುತ್ತಿರುವುದನ್ನು ಖಂಡಿಸಿ, ನಗರದ 31ನೇ ವಾರ್ಡ್ನ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಕರೇನಹಳ್ಳಿ-೨ ವಾರ್ಡ್ ನ ರಾಜೇಶ್ವರಿ ಚಿತ್ರಮಂದಿರದ ಸಮೀಪದ ಮದ್ಯದಂಗಡಿ ತೆರೆಯಲುದ್ದೇಶಿಸಿರುವ ಕಟ್ಟಡದ ಬಳಿ ಜಮಾಯಿಸಿದ ಮಹಿಳೆಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ನಗರಸಭಾ ಸದಸ್ಯೆ ಪ್ರಭಾ ನಾಗರಾಜ್ ಮಾತನಾಡಿ ಈ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಗಾರ್ಮೆಂಟ್ಸ್, ಫ್ಯಾಕ್ಟರಿಗಳಿಗೆ ಹೋಗಿ ಬರುವ ನೂರಾರು ಮಹಿಳೆಯರು, ಶಾಲಾಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲದಕ್ಕೂ ರಸ್ತೆಯಲ್ಲಿಯೇ ಓಡಾಡಬೇಕು. 2500 ಜನರಿರುವ ಜನನಿಬಿಡ ಪ್ರದೇಶ ಇದಾಗಿದ್ದು . ಅಲ್ಲದೆ ನೂರಾರು ಕುಟುಂಬಗಳು ವಾಸವಾಗಿವೆ. ಹಾಲು, ತರಕಾರಿ ಮತ್ತಿತರ ಖರೀದಿಗೆ ಮುಖ್ಯರಸ್ತೆಯಲ್ಲಿರುವ ಅಂಗಡಿಗೆ ತೆರಳಬೇಕಾಗುತ್ತದೆ. ಈಗ ಮದ್ಯದಂಗಡಿ ತೆರೆಯುವುದರಿಂದ, ಮಹಿಳೆಯರು ಮನೆಯಿಂದಾಚೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಲ್ಲಿಂದ 20 ಮೀಟರ್ ಅಂತರದಲ್ಲಿ 2-3 ದೇವಸ್ಥಾನಗಳು ಸಹ ಹತ್ತಿರದಲ್ಲಿವೆ. ಆ ರಸ್ತೆಯು ಕಿರಿದಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತೆರಳಬೇಕಿದೆ. ಜನನಿಬಿಡ ಪ್ರದೇಶವಾಗಿರುವುದರಿಂದ ಕುಡಕರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಇಲ್ಲಿನ ಗ್ರಾಮಸ್ಥರ ತೀವ್ರ ವಿರೋಧ ಇರುವುದರಿಂದ ಅಬಕಾರಿ ಮತ್ತು ಪೊಲೀಸ್ ಇಲಾಖೆ ಹೇಗೆ ಅನುಮತಿ ನೀಡಲೇಬಾರದು. ಕಳೆದ ವರ್ಷವೂ ಬಾರ್ ತೆರೆಯಲು ಮಾಲೀಕರು ಕಸರತ್ತು ನಡೆಸಿದ್ದರು. ಆಗಲೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಅಂದಿನ ಅಧಿಕಾರಿ ವರ್ಗ ಅನುಮತಿಯನ್ನು ನೀಡಿರಲಿಲ್ಲ. ಇದೀಗ ಅಧಿಕಾರಿಗಳು ಬದಲಾವಣೆ ಆಗಿರುವುದರಿಂದ ಬಾರ್ ಮಾಲೀಕರು ಅನುಮತಿ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮತ್ತೋರ್ವ ಮಹಿಳೆ ಶಮೀನಾ ಮಾತನಾಡಿ ಈ ಭಾಗದಲ್ಲಿ ಬಹುತೇಕ ಕಡುಬಡವರು ವಾಸವಾಗಿದ್ದಾರೆ. ಮನೆಗಳಲ್ಲಿ ಮಹಿಳೆಯರು ಬಿಡಿಕಟ್ಟುವುದು, ಅಗರಬತ್ತಿ ಮಾಡುವುದು, ಹೂಕಟ್ಟುವುದು ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದು ವೇಳೆ ಇಲ್ಲಿ ಬಾರ್ ಗೆ ಅನುಮತಿ ನೀಡಿದರೆ ಗಂಡಸರು ಕುಡಿತ ಚಟಕ್ಕೆ ದಾಸರಾಗಿ ದಾರಿ ತಪ್ಪುತ್ತಾರೆ. ಮಹಿಳೆಯರು, ವಯಸ್ಸಾದವರು, ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಬಾರದು ಎಂದು ಕಣ್ಣೀರಿಟ್ಟರು.
ಮಾಜಿ ಗ್ರಾ.ಪಂ ಸದಸ್ಯರ ಶಬ್ಬೀರ್ ಪಾಷ ಮಾತನಾಡಿ 2020 ರಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿದಾಗ ಇಲ್ಲಿ ಪಿಜಿ ಮಾಡುವುದಾಗಿ ಮಾಲೀಕರು ತಿಳಿಸಿದ್ದರು. ಇದೀಗ ಬಾರ್ ಅಂಡ್ ಲಾಡ್ಜ್ ಮಾಡಲು ಹೊರಟಿದ್ದಾರೆ. ಇಲ್ಲಿ ಬಾರ್ ಗೆ ಅನುಮತಿ ನೀಡಿ ಯುವಕರು ದಾರಿ ತಪ್ಪುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು. ಈಗಾಗಲೇ ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ, ಗ್ರಾಮಾಂರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.
ಪ್ರತಿಭಟನಾ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಸಾದಿಕ್ ಪಾಷ ಪ್ರತಿಭಟನಾ ನಿರತ ಮಹಿಳೆಯರಿಂದ ಮಾಹಿತಿ ಪಡೆದರು, ಸುತ್ತಮುತ್ತಲಿನ ಪ್ರದೇಶ ವೀಕ್ಷಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಪ್ರಭಾ ನಾಗರಾಜು, ಮುಖಂಡರಾದ ನಾಗರಾಜು, ರಾಶಿದ್ ಉನ್ನಿಸಾ, ಶಮೀಮ್ ತಾಜ್, ಸುಬ್ಬಮ್ಮ, ನಳೀನ, ನರಸಮ್ಮ, ಶಬ್ಬೀರ್ ಪಾಷ, ಗೌರಮ್ಮ, ನಾಜೀರಬಾದ್, ಮಾಲ ಮತ್ತಿತ್ತರರು ಉಪಸ್ಥಿತರಿದ್ದರು.