
ದೊಡ್ಡಬಳ್ಳಾಪುರ ಮಾ.17 ( ವಿಜಯ ಮಿತ್ರ ) : ಪುನೀತ್ ರಾಜಕುಮಾರ್ ರವರ 49ನೇ ಹುಟ್ಟುಹಬ್ಬದ ಅಂಗವಾಗಿ ಪುನೀತ್ ರವರಿಗೆ ಇಷ್ಟವಾದ ಬಿರಿಯಾನಿಯನ್ನು ಹಂಚಿಕೆ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ರಾಘವ ತಿಳಿಸಿದರು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 49ನೇ ಹುಟ್ಟುಹಬ್ಬದ ದಿನವನ್ನು ರೋಜಿಪುರ ಮತ್ತು ಗಂಗಾಧರಪುರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜವಂಶದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕಲಿಯುಗದ ಕೃಷ್ಣ ಎಂದರೆ ತಪ್ಪಾಗಲಾರದು. ಕಾರಣ ತಮ್ಮ ಅಭಿಮಾನಿಗಳಿಗೆ ಹೇಗೆ ಬದುಕಬೇಕು ಎಂಬುದನ್ನು ಪುನೀತ್ ರಾಜಕುಮಾರ್ ರವರ ನಡತೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಜೀವನವೇ ನಮಗೆ ಮಾರ್ಗದರ್ಶನ. ಇಂದಿನ ಯುವ ಪೀಳಿಗೆ ಪುನೀತ್ ರಾಜಕುಮಾರ್ ರವರ ಅಭಿಮಾನಿಗಳಾಗಿ ಜೀವಿಸಲು ಹೆಮ್ಮೆ ಪಡುತ್ತದೆ. ಇಂದು ಅವರ 49ನೇ ಹುಟ್ಟುಹಬ್ಬದ ವಿಶೇಷವಾಗಿ 100 ಕೆ.ಜಿ.ಬಿರಿಯಾನಿ ಊಟವನ್ನು ತಯಾರಿಸಿದ್ದು. ಬರುವ ಸಾರ್ವಜನಿಕರಿಗೆ, ಅಭಿಮಾನಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು
ಅಭಿಮಾನಿ ಹರ್ಷ ಮಾತನಾಡಿ ಇದೇ ಮೊದಲ ಬಾರಿಗೆ 14 ವರ್ಷಗಳ ನಂತರ ಬಿಡುಗಡೆಗೊಂಡ ಜಾಕಿ ಚಿತ್ರವು ಮುಂಜಾನೆ 4:30ಕ್ಕೆ ಪ್ರಥಮ ಫ್ಯಾನ್ಸ್ ಶೋ ನಡೆದಿದೆ. ಇತಿಹಾಸ ಪೂರ್ವ ಅಥವಾ ನಂತರದಲ್ಲಿ ಇಂತಹ ನಾಯಕ ನಟ ಮತ್ತೊಬ್ಬ ಬರಲು ಸಾಧ್ಯವಿಲ್ಲ. ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಆದರೆ ನಾವು ಮಾಡುವ ಸಮಾಜಮುಖಿ ಕಾರ್ಯಗಳಲ್ಲಿ, ನಮ್ಮ ಹೃದಯದಲ್ಲಿ ಸದಾ ಅವರು ಜೀವಂತವಾಗಿದ್ದಾರೆ. ಅವರಿಗೆ ಇಷ್ಟವಾದ ಬಿರಿಯಾನಿ ಊಟವನ್ನು ಇಂದು ಬರುವ ಸಾರ್ವಜನಿಕರಿಗೆ ವಿತರಿಸುತ್ತೇವೆ. ಪುನೀತ್ ರಾಜಕುಮಾರ್ ಕೇವಲ ನಾಯಕನಟರಲ್ಲ. ತಮ್ಮ ನಟನೆ ಹಾಗೂ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಹ ಮಹನೀಯರು ಎಂದರೆ ತಪ್ಪಾಗಲಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಸಮಾರಂಭದಲ್ಲಿ ಯುವನಟರಾದ ಅಂಜಿ, ಸುಬ್ರಮಣಿ, ಮಂಜುನಾಥ್ ಸೇರಿದಂತೆ ಹಲವು ಮುಖಂಡರು, ಪುನೀತ್ ರಾಜಕುಮಾರ್ ಅಭಿಮಾನಿಗಳು ಉಪಸ್ಥಿತರಿದ್ದರು.