
ದೊಡ್ಡಬಳ್ಳಾಪುರ ಮಾ.23 ( ವಿಜಯ ಮಿತ್ರ ) : ಆರ್. ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯವು 23 ವರ್ಷಗಳ ನಂತರ ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್ ) ವತಿಯಿಂದ ನಮ್ಮ ಸಂಸ್ಥೆಗೆ “A”ಶ್ರೇಣಿ ನೀಡಿ ಗೌರವಿಸಿದೆ ಎಂದು ದೇವರಾಜ್ ಅರಸ್ ಟ್ರಸ್ಟ್ ನ ಉಪಾಧ್ಯಕ್ಷ ಜೆ.ರಾಜೇಂದ್ರ ತಿಳಿಸಿದರು.
ಆರ್ ಎಲ್ ಜಾಲಪ್ಪ ತಾಂತ್ರಿಕ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಯಾವುದೇ ಉನ್ನತ ವಿದ್ಯಾ ಸಂಸ್ಥೆಗಳ ಗುಣಮಟ್ಟವನ್ನು ಹಲವು ಮನದಂಡಗಳ ಆಧಾರದಮೇಲೆ ನಿರ್ಧರಿಸುವ ಅಧಿಕಾರವನ್ನು ನ್ಯಾಕ್ ಸಂಸ್ಥೆಯು ಹೊಂದಿದ್ದು ದ. ನಮ್ಮ ಆರ್ಎಲ್ ಜಾಲಪ್ಪ ತಾಂತ್ರಿಕ ವಿದ್ಯಾ ಸಂಸ್ಥೆಯು ಪ್ರಾರಂಭಗೊಂಡು 23 ವರ್ಷ ಕಳೆದಿದೆ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆಗೆ ನ್ಯಾಕ್ ಮಂಡಳಿಯ ತ್ರಿಸದಸ್ಯರ ತಂಡ ಭೇಟಿಕೊಟ್ಟು, ನಮ್ಮ ಸಂಸ್ಥೆಯ ಎಲ್ಲಾ ವಿಭಾಗಗಳ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಿದ ನಂತರ ನಾಲ್ಕು ಅಂಕಗಳಿಗೆ 3.24 ಸಿಜಿಪಿಎ ಅಂಕಗಳೊಂದಿಗೆ ನಮ್ಮ ಸಂಸ್ಥೆಗೆ ಎ ಶ್ರೇಣಿ ನೀಡಲಾಗಿದ್ದು. ನಮ್ಮ ಸಂಸ್ಥೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
**ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ*
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಬಯಸಿ ಬೆಂಗಳೂರು ಸೇರುವುದನ್ನು ತಪ್ಪಿಸುವುದು ಹಾಗೂ ಪೋಷಕರ ಕೈಗೆಟಕುವ ದರದಲ್ಲಿ ಉತ್ತಮ ಶಿಕ್ಷಣ ನೀಡುವುದು ಆರ್ ಎಲ್ ಜಾಲಪ್ಪನವರ ಆಶಯವಾಗಿತ್ತು. ಅಂತೆಯೇ ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಗುರಿಯನ್ನು ನಮ್ಮ ಸಂಸ್ಥೆ ನಿರ್ವಹಿಸುತ್ತಿದ್ದು. ನಮ್ಮ ಕಾಲೇಜು ವಿಟಿಯು ಅಡಿಯಲ್ಲಿ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದು, ಇತರೆ ಖಾಸಗಿ ವಿದ್ಯಾ ಸಂಸ್ಥೆಗಳಿಗಿಂತ ವಿಭಿನ್ನ ವಿಶೇಷತೆಯನ್ನು ಹೊಂದಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಲವು ಸೌಕರ್ಯಗಳನ್ನು ಕಲ್ಪಿಸಿದ್ದು. ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶವನ್ನು ನಮ್ಮ ತಂಡ ಹೊಂದಿದೆ ಎಂದರು.
*ಟ್ರಸ್ಟ್ ನ ಪದಾಧಿಕಾರಿಗಳ ಸಹಕಾರದಿಂದ ಕಾಲೇಜಿಗೆ ಮರುಜೀವ*
ಟ್ರಸ್ಟ್ ನ ಪದಾಧಿಕಾರಿಗಳ ಸಹಕಾರದಿಂದ ಕಾಲೇಜು ನವೀಕರಣಕ್ಕೆ ನೂತನ ಅಧ್ಯಕ್ಷರಾದ ಜಿ.ಎಚ್.ನಾಗರಾಜು, ಕಾರ್ಯದರ್ಶಿಗಳಾದ ಹನುಮಂತ ರಾಜು ಹಾಗೂ ಇತರೆ ಒಂಬತ್ತು ಸದಸ್ಯರನ್ನು ಒಳಗೊಂಡ ಸಮಿತಿಯ ಸಹಕಾರದಿಂದ 23 ವರ್ಷದ ಹಳೆಯ ವಿದ್ಯಾಸಂಸ್ಥೆಯನ್ನು ನೂತನ ರೀತಿಯಲ್ಲಿ ಸಂಪೂರ್ಣ ಆಧುನಿಕರಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರಯೋಗಾಲಯ, ತರಗತಿ ಕೊಠಡಿಗಳು, ಆಟದ ಮೈದಾನ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು
ಆರ್ ಜೆ ಐ ಟಿ ಪ್ರಾಂಶುಪಾಲರಾದ ಡಾ. ಕೆ.ವಿಜಯ ಕಾರ್ತಿಕ್ ಮಾತನಾಡಿ ಕಳೆದ 5 ವರ್ಷಗಳ ಸತತ ಪ್ರಯತ್ನ ಇಂದು ಫಲ ಕೊಟ್ಟಿದೆ. ನಮ್ಮ ಸಂಸ್ಥೆಗೆ ಇಂದು ಲಭಿಸಿರುವ ಎ ಶ್ರೇಣಿಯ ಗೌರವಕ್ಕಾಗಿ ನಮ್ಮ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಸಾಕಷ್ಟು ಶ್ರಮ ಪಟ್ಟಿದೆ.ಹಲವಾರು ಉತ್ತಮ ಬದಲಾವಣೆಗಳ ಫಲಿತಾಂಶ ನ್ಯಾಕ್ ಕಮಿಟಿ ನಮಗೆ ನೀಡಿರುವ A ಶ್ರೇಣಿಯಾಗಿದೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 15ಕ್ಕೂ ಹೆಚ್ಚು ಸ್ಮಾರ್ಟ್ ಬೋರ್ಡ್ ಗಳ ಮೂಲಕ ಪರಿಣಾಮಕಾರಿ ವಿದ್ಯಾಭ್ಯಾಸಕ್ಕೆ ಮುನ್ನುಡಿ ಬರೆದಿದ್ದೇವೆ. ಸಾಕಷ್ಟು ಬದಲಾವಣೆ ಹಾಗೂ ಉತ್ತಮ ಅಂಶಗಳೊಂದಿಗೆ ಶಿಕ್ಷಣ ಕ್ರಾಂತಿ ಮಾಡಲು ಹೊರಟಿದ್ದೇವೆ. ನಮ್ಮ ಜವಾಬ್ದಾರಿ ಸಮಾಜಕ್ಕೆ ಉತ್ತಮ ಇಂಜಿನಿಯರ್ಸ್ ಗಳನ್ನು ನೀಡುವುದಾಗಿದೆ ಎಂದರು.
ಮಾನವ ಸಂಪನ್ಮೂಲ ಅಧಿಕಾರಿ ಪ್ರೊಫೆಸರ್ ಎನ್ಎಸ್ ಬಾಬು ರೆಡ್ಡಿ ಮಾತನಾಡಿ ನಮ್ಮ ಸಂಸ್ಥೆಯಿಂದ ಪ್ರತಿ ವರ್ಷವೂ ನೂರಾರು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದಾರೆ.ನಮ್ಮ ಮುಖ್ಯ ಉದ್ದೇಶ ಶಿಕ್ಷಣ ಪಡೆಯಲು ನಮ್ಮ ಸಂಸ್ಥೆಗೆ ಬರುವ ಪ್ರತಿ ಮಗುವಿಗೂ ಸೂಕ್ತ ಹುದ್ದೆ ಕಲ್ಪಿಸುವುದೇ ಆಗಿದೆ. ನಮ್ಮ ಸಂಸ್ಥೆಗೆ ಭೇಟಿ ಕೊಡುವ ಕಂಪನಿಗಳಲ್ಲಿ ಪ್ರಾರಂಭಿಕವಾಗಿ 3.5 ಲಕ್ಷ ದಿಂದ 30 ಲಕ್ಷದ ಉದ್ಯೋಗವಕಾಶಗಳನ್ನು ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ಗಳಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದಿಗೆ ಉದ್ಯೋಗ ಪಡೆಯಲು ಸಹಕಾರ ನೀಡಲಾಗುತ್ತದೆ ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿ ಬೇಕಿರುವ ಸಂವಹನ ಕೌಶಲ್ಯ, ಸಂದರ್ಶನ ಕೌಶಲ್ಯ, ಕಂಪ್ಯೂಟರ್ ಕೌಶಲ್ಯ, ತಂತ್ರಜ್ಞಾನ ಕೌಶಲ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಪರಿಣಿತಿ ನೀಡಲಾಗುತ್ತಿದೆ ಎಂದರು
*ಆರ್. ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಸಮಾಜಮುಖಿ ಕಾರ್ಯ*
ಗ್ರಾಮೀಣ ಭಾಗದ ನಿರುದ್ಯೋಗ ಯುವತಿಯರು ಸ್ವಾವಲಂಬಿ ಜೀವನ ನೆಡೆಸಲು ಅಗರಬತ್ತಿ ತಯಾರಿಕ ತರಬೇತಿ, ವಾಣಿಜ್ಯ ಬೆಳೆಯಾದ ಹಣಬೆ ಬೇಸಾಯದ ತರಬೇತಿ, ಜೇನುಸಾಕಾಣಿಕೆ ಮುಂತಾದ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಏನ್. ಎಸ್. ಬಾಬು ರೆಡ್ಡಿ ತಿಳಿಸಿದರು.
ಉಪ ಪ್ರಾಂಶುಪಾಲ ಡಾಕ್ಟರ್ ಶಿವಪ್ರಸಾದ್, ಪದವಿ ಕಾಲೇಜು ಪ್ರಾಧ್ಯಾಪಕ ಕೆಆರ್ ರವಿಕಿರಣ್, ನ್ಯಾಕ್ ಸಂಯೋಜಕರು,ಎಇಇ ಐ.ಎಂ. ರಮೇಶ್ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
.