
ದೊಡ್ಡಬಳ್ಳಾಪುರ: ಸ್ವಾಭಿಮಾನ, ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳನ್ನು ತಮ್ಮ ಕುಟುಂಬದವರೇ ಲೈಂಗಿಕವಾಗಿ ಬಳಸಿಕೊಂಡು, ಅವರ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ. ತೆನೆ ಹೊತ್ತ ಮಹಿಳೆಯ ಚಿಹ್ನೆ ಇಟ್ಟುಕೊಂಡಿರುವ ಜೆಡಿಎಸ್ ನಾಯಕರು, ಅಧಿಕಾರಕ್ಕಾಗಿ ಹೇಗೆ ಬೇಕಾದರೂ ಬದಲಾಗುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ದಲಿತ ಮುಖಂಡ ದೊಡ್ಡಬೆಳವಂಗಲ ಮಹೇಶ್ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಗಳು ಸಂತ್ರಸ್ಥರ ಪರವಿರದೇ ಕುಟುಂಬ ರಾಜಕಾರಣ ಮಾಡುತ್ತಿರುವುದು ಅವರ ಘನತೆಗೆ ತಕ್ಕುದ್ದಲ್ಲ. ಪೆನ್ ಡ್ರೈವ್ ಬಿಡುಗಡೆಯಲ್ಲಿ ಅವರಿವರ ಕೈವಾಡದ ಬಗ್ಗೆ ಆರೋಪಿಯ ಚಿಕ್ಕಪ್ಪ ನೀಡುತ್ತಿರುವ ಹೇಳಿಕೆಗಳು ನಾಚಿಕೆಗೇಡಿನ ಸಂಗತಿಯಾಗಿದೆ. ಸ್ವಾರ್ಥ ರಾಜಕಾರಣಕ್ಕಾಗಿ ಹೆಣ್ಣುಮಕ್ಕಳನ್ನು ಬಲಿಪಶು ಮಾಡಲಾಗುತ್ತಿದೆ. ಪೆನ್ ಡ್ರೈವ್ ಲೀಕ್ ಮಾಡಿದವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಕೊಡಿಸುವ ಸಲುವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದರು. ಅವರ ಅನುಯಾಯಿಗಳಾದ ನಾವು ಹೆಣ್ಣುಮಕ್ಕಳ ಗೌರವಕ್ಕೆ ಚ್ಯುತಿ ತಂದವರಿಗೆ ಕಠಿಣ ಶಿಕ್ಷೆ ಕೊಡಿಸಲು ರಾಜ್ಯವ್ಯಾಪಿ ಹೋರಾಟ ರೂಪಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ ಅವರು, ತನಿಖಾಧಿಕಾರಿಗಳು ತ್ವರಿತವಾಗಿ ಪ್ರಕರಣ ಬೇಧಿಸಬೇಕು. ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಮೊಮ್ಮಗನಾದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆಯ ಸಂಚಾಲಕ ರಾಜು ಸಣ್ಣಕ್ಕಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಇಬ್ಬರು ಜನ ಪ್ರತಿನಿಧಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ರಾಜಾಳ್ವಿಕೆ ರೀತಿಯಲ್ಲಿ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ. ಆರೋಪಿಯೇ ತನ್ನ ಹೀನಕೃತ್ಯವನ್ನು ವಿಡಿಯೋ ಮಾಡಿಕೊಂಡಿರುವುದು ಆತನ ವಿಕೃತಿ ತೋರಿಸುತ್ತಿದೆ. ಅಶ್ಲೀಲ ದೃಶ್ಯಗಳು ಸೋರಿಕೆಯಾಗಿದ್ದು, ಹೆಣ್ಣು ಮಕ್ಕಳ ಆತ್ಮ ಗೌರವಕ್ಕೆ ದಕ್ಕೆಯುಂಟಾಗಿದೆ. ಆ ಹೆಣ್ಣು ಮಕ್ಕಳಿಗೆ ಸರ್ಕಾರ ರಕ್ಷಣೆ ಒದಗಿಸಬೇಕು. ಇಬ್ಬರು ಆರೋಪಿಗಳಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ ಮಾತನಾಡಿ ಪ್ರಜ್ವಲ್ ಹಾಗೂ ರೇವಣ್ಣ ಅವರ ಹೀನಕೃತ್ಯ ಖಂಡನೀಯ. ರೇವಣ್ಣ ಅವರು ಅವರ ತಂದೆಯ ಮನೆಯಲ್ಲೇ ಅವಿತಿದ್ದರು. ಸಂತ್ರಸ್ಥೆಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಲೈಂಗಿಕ ದೌರ್ಜನ್ಯದ ವಿಷಯ ಕುಟುಂಬಕ್ಕೆ ಮೊದಲೇ ಗೊತ್ತಿದ್ದರೂ ಸುಮ್ಮನಿದ್ದು, ರಾಜ್ಯದ ಜನರಿಗೆ ದ್ರೋಹ ಬಗೆದಿದ್ದಾರೆ. ಪ್ರಜ್ವಲ್ ರೇವಣ್ಣ ಯಾವುದೇ ಅಪರಾಧ ಮಾಡದಿದ್ದರೆ ವಿದೇಶಕ್ಕೆ ಏಕೆ ಓಡಿ ಹೋಗಬೇಕಿತ್ತು ಎಂದು ಪ್ರಶ್ನಿಸಿದರು.
ಲೈಂಗಿಕ ದೌರ್ಜನ್ಯ ನಡೆಸುವಾಗ ಪ್ರಜ್ವಲ್ ಗೆ ಮನೆಯಲ್ಲಿನ ಹೆಣ್ಣು ಮಕ್ಕಳು ಕಾಣಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕೂಡಲೇ ಆತನನ್ನು ಬಂಧಿಸಿ ಕರೆ ತರಬೇಕು. ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಇಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಇದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗದು. ಪ್ರಜ್ವಲ್ ರೇವಣ್ಣನನ್ನು ತಕ್ಷಣವೇ ಬಂಧಿಸದಿದ್ದರೆ ಎಲ್ಲ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಿಪಿಐಎಂ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾದ್ಯ ಮಾತನಾಡಿ, ಪ್ರಜ್ವಲ್ ಹಾಗೂ ಎಷ್.ಡಿ.ರೇವಣ್ಣ ಅವರಿಗೆ ಶಿಕ್ಷೆಯಾಗಲು ಎಸ್ಐಟಿ ತ್ವರಿತವಾಗಿ ತನಿಖೆ ನಡೆಸಬೇಕು. ವಾಮಮಾರ್ಗದಲ್ಲಿ ಸಾಕ್ಷ್ಯ ನಾಶ ಮಾಡುವ ಕೆಲಸ ನಡೆಯುತ್ತಿದೆ. ಸರ್ಕಾರ ಹಾಗೂ ಎಸ್ಐಟಿ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಿಜೆಪಿ ಪಕ್ಷದ ಮುಖಂಡನೇ ಪೆನ್ ಡ್ರೈವ್ ಬಗ್ಗೆ ಪ್ರಧಾನಿ, ಗೃಹ ಸಚಿವರಿಗೆ ಪತ್ರ ಬರೆದು ಟಿಕೆಟ್ ನೀಡದಂತೆ ಕೋರಿದ್ದರೂ ಟಿಕೆಟ್ ಕೊಡಲಾಗಿದೆ. ತಪ್ಪಿತಸ್ಥರಿಗೆ ಸಂವಿಧಾನ ಬದ್ದವಾಗಿ ಶಿಕ್ಷೆ ಕೊಡದಿದ್ದರೆ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗುತ್ತದೆ. ವಿಡಿಯೋದಲ್ಲಿರುವ ಮಹಿಳೆಯರ ಗೌಪ್ಯತೆ ಕಾಪಾಡಬೇಕು. ಅವರ ಜೀವನ ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳಿಂದ ಪಾಳೆಗಾರಿಕೆ ಸಂಸ್ಕೃತಿ ಇನ್ನೂ ಇದೆ ಎಂಬುದು ತಿಳಿಯುತ್ತಿದೆ. ರಾಜ್ಯ ಸರ್ಕಾರ ಎಸ್ಐಟಿ ಮೇಲೆ ನಿಗಾ ಇರಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಮತ್ತೊಬ್ಬ ಸಂಚಾಲಕ ಚಂದ್ರ ತೇಜಸ್ವಿ ಮಾತನಾಡಿ, ಪ್ರಕರಣವನ್ನು ಮುಖ್ಯ ವಾಹಿನಿಗಳು ತಮ್ಮ ಟಿಆರ್ಪಿಗಾಗಿ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ. ಅತ್ಯಾಚಾರ ಪ್ರಕರಣವನ್ನು ವೈಭವೀಕರಿಸಲಾಗುತ್ತಿವೆ. ಹಾಸನದ ಸಾಮಾಜಿಕ ಜಾಲತಾಣಗಳು ಪ್ರಕರಣವನ್ನು ಟಿಕ್ ಟಾಕ್ ಮಾಡುತ್ತಿವೆ. ಇದರಿಂದ ಇಡೀ ಹಾಸನದ ಹೆಣ್ಣುಮಕ್ಕಳ ಘನತೆ ಹಾಳಾಗಿದೆ. ಅಲ್ಲಿನ ಹೆಣ್ಣುಮಕ್ಕಳನ್ನು ವ್ಯಬಿಚಾರಿಗಳಂತೆ ಬಿಂಬಿಸಲಾಗುತ್ತಿದೆ. ಅವರನ್ನು ರಕ್ಷಣೆ ಮಾಡುವ ಬದಲು ಬಾಯಿಚಪಲ ತೀರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳು ತಮ್ಮ ಸಾಮ್ರಾಜ್ಯ ಉಳಿಸಿಕೊಳಲು ನಾನಾ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳಿಂದ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗಲಿದೆ ಎಂಬ ಕನಿಷ್ಠ ಕಾಳಜಿ ಜನಪ್ರತಿನಿಧಿಗಳು ಹಾಗೂ ಮಾದ್ಯಮಗಳಿಗೆ ಇಲ್ಲ. ಆದ್ದರಿಂದ ನಾವೆಲ್ಲರೂ ಸಮಾಜದ ಸ್ವಾಸ್ತ್ಯ ಕಾಪಾಡಬೇಕಿದೆ ಎಂದರು.
ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು, ಸಂತ್ರಸ್ತೆಯರ ಗೌಪ್ಯತೆ ಕಾಪಾಡಿ ಅವರಿಗೆ ಸೂಕ್ತ ರಕ್ಷಣೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ ಮುಖಾಂತರ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಪಿ.ಎ.ವೆಂಕಟೇಶ್, ಮಡಿವಾಳ ಮಾಚಿದೇವ ಸಂಘದ ಮುಖಂಡ ಜಿ.ರಂಗಸ್ವಾಮಿ, ಎಸ್ಎಫ್ಐ ಸಂಘಟನೆಯ ನಟರಾಜು, ಸಿಪಿಐಎಂ ಮುಖಂಡರಾದ ರಘುಕುಮಾರ್, ಚೌಡಪ್ಪ, ದಲಿತ ಮುಖಂಡರಾದ ತಿಮ್ಮರಾಜು, ರಾಜಶೇಖರ್, ರತ್ನಮ್ಮ, ಸುಧಾ, ಶಿವ ಶಂಕರ್, ಮದ್ದೂರಪ್ಪ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.