
ಪ್ರತಿನಿತ್ಯ ಆಟೋ ಚಾಲಕರು ನೂರಾರು ಸಮಸ್ಯೆಯನ್ನು ಎದುರಿಸುತ್ತಿದ್ದು. ಆಟೋ ಚಾಲಕರ ಶಕ್ತಿಯಾಗಿ ಬೆಂಗಳೂರು ಆಟೋ ಸೇನೆ ಶ್ರಮಿಸಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಚೇತನ್ ತಿಳಿಸಿದರು
ರಾಜಾನುಕುಂಟೆ ವ್ಯಾಪ್ತಿಯಲ್ಲಿ ಬೆಂಗಳೂರು ಆಟೋ ಸೇನೆ ನೂತನ ಘಟಕದ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಳೆ ಏನದೇ ಬಿಸಿಲಿನದೇ ಪ್ರತಿನಿತ್ಯ ಸಾರ್ವಜನಿಕರ ಸೇವೆಗಾಗಿ ದುಡಿಯುವ ಆಟೋ ಚಾಲಕರು, ತಮ್ಮ ಕರ್ತವ್ಯದ ಅವಧಿಯಲ್ಲಿ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಟೋ ಚಾಲಕರು ಅಸಂಘಟಿತರಲ್ಲ,ನಾವು ಸಂಘಟಿತರು ಎಂದು ಸಾರುವ ನಿಟ್ಟಿನಲ್ಲಿ ಬೆಂಗಳೂರು ಆಟೋ ಸೇನೆ ಶ್ರಮಿಸಲಿದೆ. ಆಟೋ ಚಾಲಕನಿಗೆ ಸಮಸ್ಯೆಯಾದ ಪಕ್ಷದಲ್ಲಿ ನಮ್ಮ ಸೇನೆ ನ್ಯಾಯ ಪರವಾಗಿ,ಅವರ ಬೆಂಬಲವಾಗಿ ನಿಲ್ಲುತ್ತದೆ. ಈಗಾಗಲೇ ನಮ್ಮಲ್ಲಿ 4000ಕ್ಕೂ ಅಧಿಕ ಸದಸ್ಯರು ನೊಂದಣಿ ಮಾಡಿಸಿದ್ದು. ನೂತನವಾಗಿ ನೋಂದಣಿ ಮಾಡಬಯಸುವ ಯಾವುದೇ ಆಟೋ ಚಾಲಕರು ತಮ್ಮ ಆಧಾರ್ ಪ್ರತಿ, ವಾಹನ ಚಾಲನಾ ಪರವಾನಗಿ, ಶುಲ್ಕ ಪಾವತಿಸಿ, ನಮ್ಮ ಸಂಘಟನೆಯಲ್ಲಿ ಸೇರಬಹುದಾಗಿದೆ. ಚಾಲಕನಿಗೆ ಚಾಲಕನೇ ಬೆಂಬಲ ಎಂಬ ಮುಖ್ಯ ಉದ್ದೇಶದಿಂದ ಈ ಸಂಘಟನೆ ಕಟ್ಟಿದ್ದು. ನೂತನ ಘಟಕದಿಂದ ಮತ್ತಷ್ಟು ಬಲಬಂದಂತಾಗಿದೆ ಎಂದರು.
ನೂತನ ಕಚೇರಿಯನ್ನು ಟೇಪ್ ಕತ್ತರಿಸಿ, ದೀಪ ಬೆಳಗಿಸಿ ಸಂವಿಧಾನ ಪುಸ್ತಕ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.
ರಾಜಾನುಕುಂಟೆ ಘಟಕ ಅಧ್ಯಕ್ಷರನ್ನಾಗಿ ಜೈ ಭೀಮ್ ಚಂದ್ರುರವರನ್ನು ಆಯ್ಕೆ ಮಾಡಿದರು ಹಾಗೂ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಬೆಂಗಳೂರು ಆಟೋ ಸೇನೆಯ ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ಸುಮ ಮಾತನಾಡಿ ಆಟೋ ಚಾಲಕರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ನಮ್ಮ ಸೇನೆ ನಿಷ್ಠೆಯಿಂದ ಶ್ರಮಿಸುತ್ತದೆ . ಮೊದಲ ಬಾರಿಗೆ ಆಟೋ ವಾಹನಕ್ಕೆ ಪ್ರತ್ಯೇಕವಾಗಿ ವಾಹನ ಚಾಲನ ಪರವಾನಿಗೆಯನ್ನು ಸೇನೆಯ ವತಿಯಿಂದ ಕಡಿಮೆ ದರದಲ್ಲಿ ಮಾಡಿಸಿ ಕೊಡುತ್ತಿದ್ದು ಆಸಕ್ತ ಆಟೋ ಚಾಲಕರು ಸಂಪರ್ಕಿಸಲು ಮನವಿ ಮಾಡಿದರು. ಹಾಗೂ ಈಗಾಗಲೇ ಬೆಂಗಳೂರು ನಗರದಲ್ಲಿ 50ಕ್ಕೂ ಅಧಿಕ ಮಹಿಳೆಯರು ಆಟೋ ಚಾಲನೆ ಮಾಡುತ್ತಿದ್ದು ಮಹಿಳಾ ಚಾಲಕರಿಗೆ ಸೇನೆಯ ವತಿಯಿಂದ ಉತ್ತಮ ಬೆಂಬಲ ಸಿಕ್ಕಿದೆ . ಚಾಲಕರಿಗೆ ತೊಂದರೆಯಾದ ಪಕ್ಷದಲ್ಲಿ ಅಥವಾ ಆಟೋ ಸಮಸ್ಯೆಯಾದಲ್ಲಿ ತಕ್ಷಣವೇ ಬೆಂಗಳೂರು ಆಟೋ ಸೇನೆ ಪದಾಧಿಕಾರಿಗಳು ಸ್ಪಂದಿಸುತ್ತಿರುವುದು ಸಂತಸ ತಂದಿದೆ ಎಂದರು.
ರಾಜನಕುಂಟೆ ಘಟಕದ ಉಪಾಧ್ಯಕ್ಷ ಮುನಿರಾಜು, ಎಸ್.ವಿ.ಎಸ್.ಎಲ್.ವಿ ಮಾತನಾಡಿ ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮ ಮುಖ್ಯ ಉದ್ದೇಶ. ದಾಖಲಾತಿ ನವೀಕರಣದ ವೇಳೆ ಆಟೋ ಚಾಲಕರು ದಲ್ಲಾಳಿಗಳ ಕೈ ಗೊಂಬೆಗಳಾಗಿ ಅವರು ಹೇಳಿದಂತೆ ಕೇಳಬೇಕಾಗುತ್ತದೆ . ಮುಂದೆ ನಮ್ಮ ಸೇನೆಯ ವತಿಯಿಂದ ಯಾವುದೇ ರೀತಿಯ ದಲ್ಲಾಳಿಗಳ ನೆರವಿಲ್ಲದೆ ಸರ್ಕಾರಿ ಸೇವೆಗಳನ್ನು ಪಡೆಯುವಂತೆ ಮಾಡುತ್ತೇವೆ. ಆಟೋ ಚಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕಷ್ಟ ಪಡುತ್ತಾರೆ , ಅಂತಹ ಮಕ್ಕಳಿಗೆ ನಮ್ಮ ತಂಡದ ವತಿಯಿಂದ ವಿದ್ಯಾಭ್ಯಾಸಕ್ಕೆ ಬೇಕಾಗುವ ನೆರವು ಕಲ್ಪಿಸಲಾಗುವುದು. ಆಟೋ ಚಾಲಕರ ಯಾವುದೇ ಸಮಸ್ಯೆ ಇದ್ದರೂ ಸರಿಯೇ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ಸಹ ಕಾರ್ಯದರ್ಶಿ ಸುರೇಂದ್ರ, ಮುನಿರಾಜು ( ಗೂಳಿ) ಘಟಕ ಉಪಾಧ್ಯಕ್ಷರು,ಸಂಘಟನಾ ಕಾರ್ಯದರ್ಶಿ ಮಂಜು ದಿಬ್ಬೂರು, ಸೇರಿದಂತೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಹಾನಾಯಕ ಕಾರ್ಮಿಕ ಹಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.