
ದೊಡ್ಡಬಳ್ಳಾಪುರ : ರೋಟರಿ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಕರ್ನಾಟಕದ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿರುವ 90 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಟರಿ ಕ್ಲಬ್ ಆಫ್ ಬೆಂಗಳೂರು ಸೌರಶಕ್ತಿಯ ನೆರವನ್ನು ನೀಡುತ್ತಿದೆ.
1934 ರಲ್ಲಿ ಸ್ಥಾಪನೆಯಾದ ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ 90 ನೇ ವರ್ಷದಲ್ಲಿದ್ದು, 334 ಸದಸ್ಯರನ್ನು ಹೊಂದಿರುವುದಲ್ಲದೇ ಭಾರತದ ಅತ್ಯಂತ ದೊಡ್ಡ ರೋಟರಿ ಕ್ಲಬ್ಗಳಲ್ಲಿ ಒಂದಾಗಿದೆ ಎಂದು ರೋಟೇರಿಯನ್ ನೂತನ ಅಧ್ಯಕ್ಷೆ ಗೌರಿ ಓಝಾ ತಿಳಿಸಿದರು.
ರೋಟೇರಿಯನ್ ಕ್ಲಬ್ ನ 90 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು “ಸಮುದಾಯಕ್ಕೆ ನಮ್ಮ 90 ವರ್ಷಗಳ ಸೇವೆಯ ಸಂಸ್ಮರಣೆಗಾಗಿ, 2024-25ರ ಸಾಲಿನಲ್ಲಿ ನಾವು ಕರ್ನಾಟಕದ 90 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ನೆರವು ನೀಡಲು ನಿರ್ಧರಿಸಿದ್ದೇವೆ. ಈ ಯೋಜನೆಯ ಒಟ್ಟು ವೆಚ್ಚ 2.7 ಕೋಟಿ ರೂ. ಗಳಾಗಿರುತ್ತದೆ, ನಾವು ಹೆರಿಗೆ ಕೋಣೆ, ಲಸಿಕೆ ಫ್ರೀಜರ್ಗಳು, ಪ್ರಯೋಗಾಲಯಗಳು ಮುಂತಾದವುಗಳ ಕಡೆಗೆ ಗಮನ ಕೇಂದ್ರೀಕರಿಸುತ್ತೇವೆ. ಇತರೆ ನಿಗದಿತ ಯೋಜನೆಗಳು ಸಾಮಾನ್ಯ ರೀತಿಯಲ್ಲಿ ನಡೆಯಲಿವೆ” ಎಂದರು.
ರೋಟೇರಿಯನ್ಗಳು, ಕುಟುಂಬಗಳು ಮತ್ತು ಹಿತೈಷಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಗೌರಿ ಓಝಾ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮಾರ್ಗಗಳ ಕಡೆಗೆ ಆರ್ಸಿಬಿ ದೃಷ್ಟಿ ಹರಿಸಲಿದೆ ಎಂದರು.
ಈ ಸಂದರ್ಭದಲ್ಲಿ ರೋಟೇರಿಯನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.