
ದೊಡ್ಡಬಳ್ಳಾಪುರ : ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ಕಟ್ಟಡವನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕೊನಘಟ್ಟ ಗ್ರಾಮ ಪಂಚಾಯಿತಿ ಕಟ್ಟಡವಿರುವ ಜಾಗ ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆ ಮಾಡುವ ಮೂಲಕ ಪಂಚಾಯಿತಿ ಕಟ್ಟಡವು ಖಾಸಗಿ ವ್ಯಕ್ತಿಯ ಪಾಲಾಗಿದೆ, ಪಂಚಾಯಿತಿ ಕಟ್ಟಡದ ಜಾಗವನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ.
ತಾಲ್ಲೂಕಿನ ಕೊನಘಟ್ಟ ಗ್ರಾಮದ ಸರ್ವೆ ನಂಬರ್ 351/2 ಹಾಗೂ 351/3ರ ಒಟ್ಟು 4 ಗುಂಟೆ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವಿದ್ದು , ಕಳೆದ 40 ವರ್ಷಗಳಿಂದ ಇದೇ ಜಾಗದಲ್ಲಿ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ, ಗ್ರಾಮ ಪಂಚಾಯಿತಿ ಹೆಸರಲ್ಲಿ 11 ಬಿ ಇ ಖಾತೆಯನ್ನ ಹೊಂದಿದೆ. ಆದರೆ 20 ದಿನಗಳ ಹಿಂದೆ ಪಂಚಾಯಿತಿ ಜಾಗವನ್ನು ಬೇರೆಯವರ ಹೆಸರಿಗೆ ಪೌವತಿ ಖಾತೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ,
ಸರ್ವೆ ನಂಬರ್ 351/2 ಮತ್ತು 351/3 ಅನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಇಂದು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, ಇದೇ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್ ಮಾತನಾಡಿ ಗ್ರಾಮ ಪಂಚಾಯಿತಿ ಜಾಗ ಬೇರೆಯವರಿಗೆ ಖಾತೆಯಾಗಿರುವುದು ತಿಳಿದ ತಕ್ಷಣವೇ ತುರ್ತು ಸಭೆಯನ್ನ ಕರೆಯಲಾಗಿತು, ಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಖಾತೆ ಬದಲಾವಣೆಯ ಬಗ್ಗೆ ಯಾವುದೇ ಉತ್ತರ ನೀಡಿಲ್ಲ, ಸಭೆಯನ್ನು ಆಯೋಜನೆ ಮಾಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳೇ ಸಭೆಗೆ ಗೈರು ಹಾಜರಾಗಿದ್ದು, ಸಭೆಯ ನಡುವೆ ಏಕಾಏಕಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವುದೇ ಕಾರಣ ಹೇಳದೆ ಎದ್ದು ಹೋದರು,ಈ ಬೆಳವಣಿಗೆಗಳನ್ನು ಗಮನಿಸಿದ್ದಾಗ ಖಾತೆ ಬದಲಾವಣೆಯ ಹಿಂದೆ ಇವರು ಶಾಮೀಲಾಗಿರುವ ಸಂಶಯ ಇದೆ ಎಂದರು.
ಗ್ರಾಮದ ಮುಖಂಡರಾದ ಕೃಷ್ಣಪ್ಪ ಮಾತನಾಡಿ, ಖಾತೆ ಬದಲಾಣೆ ಮಾಡುವಾಗ ಕಂದಾಯ ಅಧಿಕಾರಿಗಳ ಸ್ಥಳಕ್ಕೆ ಬಂದು ಮಹಜರ್ ಮಾಡಿ ತದನಂತರ ಖಾತೆ ಬದಲಾವಣೆ ಮಾಡಬೇಕು, ಆದರೆ ರೆವೆನ್ಸೂ ಇನ್ಸ್ ಪೇಕ್ಟರ್ ಆಗಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಖಾತೆ ಬದಲಾವಣೆ ಮಾಡಿದ್ದಾರೆ, ಗ್ರಾಮ ಪಂಚಾಯಿತಿ ಕಟ್ಟಡ ಜಾಗದ ಖಾತೆಯನ್ನು ಬದಲಾವಣೆ ಮಾಡುವಾಗಲು ಅಧಿಕಾರಿಗಳ ಸಾಮಾನ್ಯ ಜ್ಞಾನ ಬಳಸದೆ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು.
ಗ್ರಾಮ ಪಂಚಾಯಿತ ಜಾಗದ ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೊನಘಟ್ಟ ಪಿಡಿಓ ರಶ್ಮಿ, ಸರ್ವೆ ನಂಬರ್ 351/1 ಮತ್ತು 351/3 ಎರಡರ ಜಾಗದ ಖಾತೆ ಬದಲಾವಣೆ ಮಾಡುವಾಗ ಅಧಿಕಾರಿಗಳಿಂದ ಸ್ಥಳ ಪರಿಶೀಲನೆಯಾಗಿಲ್ಲ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ ಹಾಗೂ ನೋಟಿಸ್ ಸಹ ನೀಡಿರುವುದಿಲ್ಲ, ಯಾವ ದಾಖಲೆಗಳ ಮೇಲೆ ಖಾತೆ ಬದಲಾವಣೆ ಮಾಡಲಾಗಿದೆ ಮತ್ತು ಗ್ರಾಮ ಪಂಚಾಯಿತಿ ಹೆಸರಿಗೆ ಮತ್ತೆ ಪಹಣಿ ಮತ್ತು ಖಾತೆ ಮಾಡಿಕೊಡುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲರಾಜ್, ಗ್ರಾಮಸ್ಥರಾದ ಪುನೀತ್ ಕುಮಾರ್,ನಾಗೇಶ್, ನಂಜೇಗೌಡ, ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಗ್ರಾಮಸ್ಥರು ಇದ್ದರು.