
ದೊಡ್ಡಬಳ್ಳಾಪುರ : ಕಳೆದ 50 ವರ್ಷಗಳಿಂದ ಅನುಭವದಲ್ಲಿದ್ದು, ಸುಮಾರು 30 ವರ್ಷಗಳ ಹಿಂದೆ ಹಕ್ಕು ಪತ್ರ ಪಡೆದು ಕಿಮ್ಮತ್ತು ಕಟ್ಟಿ ಪಡೆದ ಭೂಮಿಯೊಂದಿಗೆ ಬದುಕು ಕಟ್ಟಿಕೊಂಡಿರುವ ಕುಟುಂಬ ನಮ್ಮದಾಗಿದ್ದು . ಈಗ ಕೆಲ ಪ್ರಭಾವಿಗಳು ನಮ್ಮ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ದಾಖಲೆಗಳು ಸೃಷ್ಟಿಸಿ ನಮ್ಮ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಾಯತ್ರಿಮ್ಮ ತಿಳಿಸಿದರು.
ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೆಲ ಪ್ರಭಾವಿಗಳು, ದಲ್ಲಾಳಿಗಳು ನಮ್ಮನ್ನು ಒಕ್ಕಲೆಬ್ಬಿಸಲು ಹಾಗೂ ಅಕ್ರಮವಾಗಿ ನಮ್ಮ ಭೂಮಿಯನ್ನು ಸ್ವಾದೀನ ಪಡೆಸಿಕೊಳ್ಳಲು ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಅವರಿಂದ ನಮಗೆ ರಕ್ಷಣೆ ಕಲ್ಪಿಸಬೇಕೆಂದು ಜಮೀನಿನ ಮಾಲೀಕರಾದ ಗಾಯತ್ರಮ್ಮ ಮಾದ್ಯಮಗಳ ಮುಂದೆ ಮನವಿ ಮಾಡಿದರು.
ಜಮೀನಿನ ಮುಂಜೂರಾತಿ ಕುರಿತು ಮಾತನಾಡಿದ ಅವರು
ತಾಲೂಕಿನ ತೂಬಗೆರೆ ಹೋಬಳಿಯ ಕಣಿವೆಪುರ ಗ್ರಾಮದ ಸರ್ವೆ ನಂಬರ್ 102/1 ರಲ್ಲಿ ಇರುವ 2.10ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನರಸಪ್ಪನವರ ಮಗನಾದ ಕೃಷ್ಣಪ್ಪನವರಿಗೆ ಆರ್ ಎಸ್ ಜಾಲಪ್ಪನವರು ಭೂ ಮಂಜೂರಾತಿ ಸಲಹೆ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಟಿ ಕೆಂಪಹನುಮಯ್ಯ, ಲಕ್ಷ್ಮಿದೇವಮ್ಮ, ಕೆ. ಸಿ.ಗುರುರಾಜಪ್ಪ. ರವರ ಸಮಿತಿಯ ಆದೇಶದಂತೆ 1994- 95ರಲ್ಲಿ ಕಿಮ್ಮತ್ತಿನ ಮೂಲಕ ಷರತ್ತುಗಳನ್ನು ಒಳಗೊಂಡ ಹಕ್ಕು ಪತ್ರವನ್ನು ಸರ್ವೇ ನಂಬರ್ 102 ರಲ್ಲಿ 2.10ಗುಂಟೆ ಜಮೀನಿನಲ್ಲಿ ಕೃಷ್ಣಪ್ಪ ಬಿನ್ ನರಸಪ್ಪ ರವರ ಹೆಸರಿಗೆ ನೀಡಿದ್ದು. ಸದರಿ ಸರ್ವೆ ನಂಬರ್ ನ 2. 10ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಕಂದಾಯ ಕಟ್ಟುವ ಮೂಲಕ ವ್ಯವಸಾಯ ಮಾಡಿ ಜೀವನೋಪಾಕ್ಕೆ ಮಾರ್ಗ ಮಾಡಿಕೊಂಡು ನಮ್ಮ ಜೀವನ ಸಾಗಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಮಧ್ಯೆ ನಮ್ಮ ಭೂಮಿಯನ್ನು ಚಿಕ್ಕಬಳ್ಳಾಪುರದ ನಿವಾಸಿ ಆಂಧ್ರ ಮೂಲದ ಕೆಲ ಪ್ರಭಾವಿಗಳ ಬೆಂಬಲದಿಂದ ನಕಲಿ ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಎಸಿ ಕಛೇರಿಯಲ್ಲಿ ಅಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ ಹಾಗೆಯೇ ಡಿಸಿ ಕಚೇರಿಯಲ್ಲಿ ಆರ್. ಪಿ.ಸಂಖ್ಯೆ 102/2015-16 (ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ) ಅಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ.ನಮ್ಮ ಜಮೀನಿಗೆ ಅಕ್ರಮವಾಗಿ ಆರ್ ಟಿ ಸಿ ಬದಲಾವಣೆಗೆ ಆದೇಶ ಮಾಡಿಸುವ ಮೂಲಕ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಗಾಯಿತ್ರಮ್ಮ ಆರೋಪಿಸಿದ್ದಾರೆ.
ನನ್ನ ಗಂಡನಾದ ಕೆ ರಾಜುರವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ನ್ಯಾಯಾಲಯ ಪೊಲೀಸ್ ಠಾಣೆಗೆ ನಾನೇ ಓಡಾಡುವ ಪರಿಸ್ಥಿತಿ ಎದುರಾಗಿದ್ದು, ನಮ್ಮದು ಸಾಮಾನ್ಯ ಬಡ ಕುಟುಂಬ ಈಗಾಗಲೇ ಸಾಕಷ್ಟು ನೊಂದು ಬೆಂದಿದ್ದೇವೆ. ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರೂ ಸಹ ನಮ್ಮ ಭೂಮಿಗೆ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳು ಪ್ರಬಲ ವ್ಯಕ್ತಿಗಳ ಬೆಂಬಲಕ್ಕೆ ನಿಂತಿದ್ದು ನಮ್ಮ ಕಷ್ಟ ಯಾರಿಗೂ ಕಾಣದಂತಾಗಿದೆ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಕಣ್ಣೀರು ಹಾಕಿದರು.
ನರಸಿಂಹಮೂರ್ತಿ ಮಾತನಾಡಿ ಯಾವುದೇ ರೀತಿಯ ಮೂಲ ದಾಖಲಾತಿಗಳಿಲ್ಲದಿದ್ದರೂ ಅಕ್ರಮವಾಗಿ ನಮ್ಮ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ಬದುಕಿಗೆ ಆಸರೆಯಾಗಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಇದು ನಮ್ಮ ಭೂಮಿ ಸ್ಥಳೀಯ ಅಧಿಕಾರಿಗಳು ಇನ್ನಾದರೂ ಎಚ್ಚೆದ್ದು ಬಡವರ ಪರ ನ್ಯಾಯ ನೀಡಬೇಕು ಎಂದು ಮನವಿ ಮಾಡಿದರು.
ಈ ಕುರಿತಂತೆ ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು ಓ ಎಸ್ ಸಂಖ್ಯೆ 97/2024 ರ ಅನ್ವಯ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು ಪ್ರಸ್ತುತ ವಿಚಾರಣೆ ಹಂತದಲ್ಲಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಭೂಗಳ್ಳರು, ದಲ್ಲಾಳಿಗಳು ನಮ್ಮನ್ನು ಸದರಿ ಸ್ಥಳದಿಂದ ಒಕ್ಕಲೆಬ್ಬಿಸಲು ಭೂಮಿಯನ್ನು ಸ್ವಾಧೀನ ಪಡೆದುಕೊಳ್ಳಲು ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಿದ್ದು. ನಮಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡಿದರು.