
ಯಲಹಂಕ :ರಾಜಾನುಕುಂಟೆ ಸೆ. 18( ವಿಜಯಮಿತ್ರ ) : ನಮ್ಮ ಸಂಘಟನೆ ವತಿಯಿಂದ ಚಾಲಕರಿಗಾಗಿ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡಲಾಗುತ್ತಿದ್ದು. ವಾಹನ ಚಾಲಕರಿಗೆ ಸಮಸ್ಯೆ ಎದುರಾದಲ್ಲಿ ನಮ್ಮ ಬೆಂಗಳೂರು ಆಟೋ ಸೇನೆ ಸದಾ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಬೆಂಗಳೂರು ಆಟೋ ಸೇನೆ ರಾಜ್ಯಾಧ್ಯಕ್ಷ ಎಂ.ಆರ್.ಚೇತನ್ ತಿಳಿಸಿದರು.
ಆಟೋಚಾಲಕರಿಗೆ ಕಾನೂನು ಅರಿವು ಮತ್ತು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರು ಆಟೋ ಸೇನೆ ವತಿಯಿಂದ ಆಟೋ ಚಾಲಕರ ಜಾಗೃತಿ ಅಭಿಯಾನ & ಜನಸ್ಪಂದನ ಕಾರ್ಯಕ್ರಮವನ್ನು ರಾಜಾನುಕುಂಟೆಯ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ದಲ್ಲಿ ಆಯೋಜನೆ ಮಾಡಲಾಗಿತ್ತು. ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ಥಳೀಯವಾಗಿ ಚಾಲಕರಿಗೆ ಹಲವಾರು ಸಮಸ್ಯೆಗಳಿವೆ, ಈ ಕುರಿತು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಯೋಜನೆ ಮಾಡಲಾಗಿದೆ ಹಾಗೂ ಚಾಲಕರಿಗೆ ಕಾನೂನು ಅರಿವು , ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ರಾಜಾನುಕುಂಟೆ ಆಟೋ ಘಟಕದ ಪದಾಧಿಕಾರಿಗಳ ಸಹಕಾರದೊಂದಿಗೆ ರೂಪಿಸಲಾಗಿದೆ ಎಂದರು.
ಶ್ರೀನಿವಾಸ್ ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ಮೋಟರ್ ವಾಹನ ನಿರೀಕ್ಷಕರು ,ಈರಮ್ಮ ಸಬ್ ಇನ್ಸ್ಪೆಕ್ಟರ್ ರಾಜಾನುಕುಂಟೆ ಪೊಲೀಸ್ ಠಾಣೆ,ರಮೇಶ್ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜಾನುಕುಂಟೆ,ಸಾಯಿ ನಾಗರಾಜ್ ಅಂಚೆ ಇಲಾಖೆ ರಾಜಾನುಕುಂಟೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟೋ ಚಾಲಕರೊಂದಿಗೆ ಸಂವಾದ ನಡೆಸಿದರು.
ಯಲಹಂಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಶ್ರೀನಿವಾಸ್ ಮಾತನಾಡಿ ಆಟೋ ಚಾಲಕರಿಂದ ಆಯೋಜನೆ ಮಾಡಲಾಗಿರುವ ಉತ್ತಮ ಕಾರ್ಯಕ್ರಮ ಇದಾಗಿದ್ದು.ಚಾಲಕರಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ಚಾಲಕರು ಸುರಕ್ಷತೆಯಿಂದ ವಾಹನ ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಸಹಕಾರ ನೀಡಲಿ ಎಂಬುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾರಿಗೆ ಇಲಾಖೆ ಕುರಿತು ಚಾಲಕರಲ್ಲಿ ಇದ್ದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಕಲಾವಿದರಾದ ಮಲ್ಲೇಶ್ ನಿರೂಪಣೆ ಮಾಡುವ ಮೂಲಕ ಸುಂದರವಾಗಿ ನೆಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಆಯೋಜಕ ಮುನಿರಾಜು ಎಸ್.ವಿ( ಎಸ್ ಎಲ್ ವಿ ) ಮಾತನಾಡಿ ಆಟೋ ಚಾಲಕರಿಗೆ ಕಾನೂನಿನ ಅರಿವಿನ ಅವಶ್ಯಕತೆ ಇದೆ ಹೀಗಾಗಿ ನಮ್ಮ ಬೆಂಗಳೂರು ಆಟೋ ಸೇನೆ ವತಿಯಿಂದ ಸ್ಥಳೀಯ ಚಾಲಕರಿಗೆ ಅನುಕೂಲವಾಗುವಂತೆ ಹಲವು ಇಲಾಖೆಗಳ ಅಧಿಕಾರಿಗಳಿಂದ ಜಾಗೃತಿ ಕಾರ್ಯಕ್ರಮ ಹಾಗೂ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಧಿಕಾರಿಗಳು ಪಾಲ್ಗೊಂಡು ಆಟೋ ಚಾಲಕರಿಗೆ ಹಲವಾರು ಉಪಯುಕ್ತ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನೂರಾರು ಆಟೋ ಚಾಲಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಆಟೋಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚೇತನ್,ಶ್ರೀನಿವಾಸ್ ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ಇನ್ಸ್ಪೆಕ್ಟರ್,ಈರಮ್ಮ ಸಬ್ ಇನ್ಸ್ಪೆಕ್ಟರ್ ರಾಜಾನುಕುಂಟೆ ಪೊಲೀಸ್ ಠಾಣೆ,ರಮೇಶ್ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜಾನುಕುಂಟೆ,ಸಾಯಿ ನಾಗರಾಜ್ ಅಂಚೆ ಇಲಾಖೆ ರಾಜಾನುಕುಂಟೆ,ಆರ್ .ಚಂದ್ರಶೇಖರ್ ಅಧ್ಯಕ್ಷರು ರಾಜಾನುಕುಂಟೆ ಆಟೋ ಘಟಕ,ಕಾರ್ಯಕ್ರಮದ ಆಯೋಜಕರಾದ ಮುನಿರಾಜು ಎಸ್.ವಿ.(ಎಸ್.ಎಲ್.ವಿ),ಆನಂದ್ ಮಾರನೊರ್ ಸಮಾಜ ಸೇವಕರು,ರಾಜೇಶ್ ಸಮಾಜ ಸೇವಕರುಆರ್.ವಿ.ನಾಗೇಶ್ ಪ್ರಧಾನ ಕಾರ್ಯದರ್ಶಿ ರಾಜಾನುಕುಂಟೆ ಆಟೋಘಟಕ, ಸೇರಿದಂತೆ ಎಲ್ಲಾ ಘಟಕದ ಪದಾಧಿಕಾರಿಗಳು, ಚಾಲಕರು ಉಪಸ್ಥಿತರಿದ್ದರು.