
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 02 (ವಿಜಯಮಿತ್ರ):- ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆಯನ್ನು ಸಚಿವ ಕೆ ಹೆಚ್ ಮುನಿಯಪ್ಪ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಿದವರು, ಜಗತ್ತು ಮೆಚ್ಚಿಕೊಂಡ ಮಹಾನ್ ಚೇತನರು. ಗಾಂಧೀಜಿಯವರು ರಾಷ್ಟ್ರಪಿತರೆಂದೇ ಪ್ರಸಿದ್ಧರಾದವರು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ನೀತಿಯನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮ ರೂವಾರಿಯಾಗಿ ಸ್ವಾತಂತ್ರ್ಯ ತಂದುಕೊಟ್ಟರು.
ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ. ಹೀಗಾಗಿ ವಿಶ್ವದಾದ್ಯಂತ ಗಾಂಧಿ ಜಯಂತಿ ದಿನವನ್ನು ಆಚರಿಸಲಾಗುತ್ತದೆ. ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ ಎಂದರು.
ದಂಡಿ ಉಪ್ಪಿನ ಸತ್ಯಾಗ್ರಹ
ಉಪ್ಪಿನ ಕಾನೂನನ್ನು ಮುರಿಯಲು 1930 ರ ಮಾರ್ಚ್ 12 ರಂದು ದಂಡಿಯಾತ್ರೆಯನ್ನು ಸಬರಮತಿ ಆಶ್ರಮದಿಂದ ಆರಂಭಿಸಿ, 1930 ಏಪ್ರಿಲ್ 06 ರಂದು ದಂಡಿ ತಲುಪಿತು. ಸುಮಾರು 388 ಕಿಮೀ ದೂರದ ಪಾದಯಾತ್ರೆಯಲ್ಲಿ 78 ನಿಷ್ಠಾವಂತ ಅನುಯಾಯಿಗಳು ಸೇರಿ 60 ಸಾವಿರ ಹೋರಾಟಗಾರರೊಂದಿಗೆ ನಡೆಸಿದ ಉಪ್ಪಿನ ಸತ್ಯಾಗ್ರಹ ದೇಶದ ಐತಿಹಾಸಿಕ ಸ್ವಾತಂತ್ರ್ಯ ಹೋರಾಟವಾಗಿದೆ.ಮಹಾತ್ಮ ಗಾಂಧಿಜೀಯವರು ಸಬರಮತಿ ಆಶ್ರಮದಿಂದ ದಂಡಿಯವರೆಗೂ ಉಪ್ಪಿನ ಸತ್ಯಾಗ್ರಹ ಕೈಗೊಂಡ ಹೆದ್ದಾರಿಯನ್ನು ಅಂದು ನಾನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವನಾಗಿದ್ದಾಗ ಸುಮಾರು 388 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸುವ ಅವಕಾಶ ಸಿಕ್ಕಿದ್ದು ನನ್ನ ರಾಜಕೀಯ ಜೀವನದ ಅತ್ಯಂತ ಅವಿಸ್ಮರಣೀಯವಾದುದಾಗಿದೆ ಎಂದರು.
Ad
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜಣ್ಣ, ತಾಲ್ಲೂಕಿನ ಗ್ಯಾರಂಟಿ ಅಧ್ಯಕ್ಷರಾದ ಜಗನ್ನಾಥ್, ಬಯ್ಯಪ್ಪಾ ಅಧ್ಯಕ್ಷರಾದ ಶಾಂತಕುಮಾರ್, ಕೃಷಿ ಸಮಾಜದ ಅಧ್ಯಕ್ಷರಾದ ರವಿ, ರಾಮಚಂದ್ರಪ್ಪ,ಲೋಕೇಶ್, ಮಂಜುನಾಥ್,ಮಹಿಳಾ ಮುಖಂಡರು, ಸೇವಾದಳದ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.