
ದೊಡ್ಡಬಳ್ಳಾಪುರ (ವಿಜಯಮಿತ್ರ ): ತಾಲ್ಲೂಕಿನಲ್ಲಿರುವ ಎಮ್.ಎಸ್.ಜಿ.ಪಿ ಘಟಕ ಸ್ಥಾಪನೆಯಾದಾಗ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಿದ್ದ Consent for operation ಷರತ್ತುಗಳನ್ನು ಘಟಕವು ಪಾಲಿಸುತ್ತಿವೆಯೇ; ಷರತ್ತುಗಳನ್ನು ಪಾಲಿಸುತ್ತಿರುವ ಕುರಿತು ಎಷ್ಟು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗಿದೆ ಎಂಬ ವರದಿ ನೀಡುವಂತೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ವಿಧಾನಸಭೆಯಲ್ಲಿ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಹೌದು ತಾಲೂಕಿನಲ್ಲಿ ಈ ಹಿಂದೆ ಸದ್ದು ಮಾಡಿದ್ದ ಎಮ್ ಎಸ್ ಜಿ ಪಿ ಘಟಕವು ತನ್ನ ಕಾರ್ಯನಿರ್ವಹಣೆಯಲ್ಲಿ ಸಿಎಫ್ಓ ಷರತ್ತುಗಳನ್ನು ಉಲ್ಲಂಘನೆ ಮಾಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಪ್ರಶ್ನೆ ಮಾಡಿದ್ದಾರೆ. ಸ್ಥಳೀಯ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಘಟಕದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ಉತ್ತರಿಸಿದೆ,
ಕರ್ನಾಟಕ ಪರವಾನಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಿದ್ದ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ಕಾಲಕಾಲಕ್ಕೆ ಸದರಿ ಘಟಕವನ್ನು ತಪಾಸಣೆ ನಡೆಸುತ್ತಿದ್ದು, ತಪಾಸಣೆ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಆಧಾರದ ಮೇಲೆ ಮಂಡಳಿಯು ಜಲ ಮಾಲಿನ್ಯ (ನಿವಾರಣೆ) ನಿಯಂತ್ರಣ ಕಾಯ್ದೆ, 1974ರ ಅಡಿಯಲ್ಲಿ ದಿನಾಂಕ :01.12.20210 ಘಟಕದಿಂದ ಲೀಚೆಟ್ (Leachate) ಹೊರ ಹರಿಯುವಿಕೆಯನ್ನು ತಡೆಗಟ್ಟಲು ನಿಷೇಧಿತ ಆದೇಶವನ್ನು (Restraining Order) ಸದರಿ ಘಟಕಕ್ಕೆ ಹೊರಡಿಸಿರುತ್ತದೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ :30.12.2021 ರಂದು ಮಂಡಳಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸದರಿ ಘಟಕದ ಮುಖ್ಯಸ್ಥರ ಜೊತೆ ಮೌಖಿಕ ವಿಚಾರಣೆ ನಡೆಸಿ 30 ದಿನಗಳ ಒಳಗಾಗಿ ಸಂಪೂರ್ಣ ಪ್ರದೇಶದ ಮಳೆ ನೀರಿನ ಚರಂಡಿ ವ್ಯವಸ್ಥೆ, ಅದರ ಅಂದಾಜು ವೆಚ್ಚವನ್ನು ಸಲ್ಲಿಸುವಂತೆ ಹಾಗೂ ಅಂತರ್ಜಲ ಅಧ್ಯಯನ ಮತ್ತು ಅದರ ಸ್ಥರಗಳ (Hydrological study) ಲೀಚೆಟ್ ಅನ್ನು (Leachate) ಸಂಗ್ರಹಿಸಲು ಇಂಜಿನಿಯರಿಂಗ್ ವಿನ್ಯಾಸದ ಲಗೂನ್ಗಳನ್ನು ತುರ್ತಾಗಿ ನಿರ್ಮಿಸುವುದು. ಇದರ ಕಾಲಮಿತಿಯ ಕ್ರಿಯಾ ಯೋಜನೆಯನ್ನು ಸೂಚಿಸಿ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ಇದರಂತೆ ಎಮ್.ಎಸ್.ಜಿ.ಪಿ ಘಟಕದವರು ಕಾಲಮಿತಿಯ ಕ್ರಿಯಾಯೋಜನೆಯನ್ನು 07.04.2022 ರಂದು ಮಂಡಳಿಗೆ ಸಲ್ಲಿಸಿದ್ದು, ಸದರಿಯವರು ಕ್ರಿಯಾಯೋಜನೆಯಲ್ಲಿ ತಿಳಿಸಿದ್ದ ಯಾವುದೇ ಕ್ರಮವನ್ನು ಕೈಗೊಂಡಿರದ ಕಾರಣ ಮಂಡಳಿಯಿಂದ ಮತ್ತೊಮ್ಮೆ ದಿನಾಂಕ:09.06.2023ರಂದು ವಿಚಾರಣೆಯನ್ನು ನಡೆಸಿ 100 KLD ಸಾಮರ್ಥ್ಯದ ಲೀಚೆಟ್ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ವಿಸ್ತೀರ್ಣಾ ಸಮ್ಮತಿ ಪತ್ರ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಲು ಸೂಚಿಸಲಾಗಿತ್ತು. ಪ್ರಸ್ತುತ ಚಾಲನಾ ಸಮ್ಮತಿ ಪತ್ರವನ್ನು ಹಿಂತೆಗೆದುಕೊಳ್ಳಲು ಸೂಚಿಸಿ ನಿರ್ದೇಶನವನ್ನು ನೀಡಲಾಗಿರುತ್ತದೆ.
ದಿನಾಂಕ:31.08.2023ರಂದು ಸದರಿ ಘಟಕವನ್ನು ದೊಡ್ಡಬಳ್ಳಾಪುರ ಪ್ರಾದೇಶಿಕ ಅಧಿಕಾರಿಗಳು ಪರಿವೀಕ್ಷಣೆ ನಡೆಸಿ, ಪರಿವೀಕ್ಷಣಾ ವರದಿಯನ್ನು ಕೇಂದ್ರ ಕಛೇರಿಗೆ ಕಳುಹಿಸಿ “ಕಾರ್ಯ ಚಾಲನಾ ಸಮ್ಮತಿ ಪತ್ರ ಮತ್ತು ಪರಿಸರ ವಿಮೋಚನಾ ಪತ್ರದಲ್ಲಿ ಸೂಚಿಸಿರುವ ಷರತ್ತುಗಳನ್ನು ಕಾರ್ಯಗತಗೊಳಿಸುವವರೆಗೂ ಸದರಿ ಘಟಕವು ಹೊರಗಿನಿಂದ ಘನತ್ಯಾಜ್ಯವನ್ನು ತೆಗೆದುಕೊಳ್ಳದಂತೆ ಹಾಗೂ ಅಂತರ್ಜಲ ಮತ್ತು ಅದರ ಸ್ಥರಗಳ ಅಧ್ಯಯನವನ್ನು (Hydrological study) ಮಾಡುವಂತೆ ನಿರ್ಬಂಧಿಸಲು” ಶಿಫಾರಸ್ಸನ್ನು ಮಾಡಿರುತ್ತಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಂದು ಉತ್ತರದಲ್ಲಿ ತಿಳಿಸಲಾಗಿದೆ ಹಾಗೂ ಎಮ್.ಎಸ್.ಜಿ.ಪಿ ಘಟಕವು ಷರತ್ತುಗಳನ್ನು ಪಾಲಿಸದ ಬಗ್ಗೆ ನುರಿತ ತಾಂತ್ರಿಕ ತಜ್ಞರುಗಳ ಸಮಿತಿಯಿಂದ ಸದರಿ ಘಟಕವನ್ನು ಪರಿವೀಕ್ಷಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಎಂ ಎಸ್ ಜಿ ಪಿ ಘಟಕವನ್ನು ಆದಷ್ಟು ಬೇಗ ತೆರವುಗೊಳಿಸಲಿ ಘಟಕವು ಹೊರ ಸೂಸುವ ಕೆಮಿಕಲ್ ಯುಕ್ತ ನೀರು, ದುರ್ವಾಸನೆಯಿಂದ ನಮ್ಮ ದೈನಂದಿಕ ಜೀವನ ನರಕವಾಗಿದೆ. ಸ್ಥಳೀಯ ಶಾಸಕರು ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ , ಸರ್ಕಾರದ ಆದೇಶಗಳನ್ನು ಪಾಲನೆ ಮಾಡದ ಘಟಕದಿಂದಾಗಿ ಸ್ಥಳೀಯ ರೈತರು ಸಾಕಷ್ಟು ನೊಂದಿದ್ದಾರೆ. ಇನ್ನಾದರೂ ಕಸ ವಿಲೇವಾರಿ ಘಟಕದಿಂದ ನಮಗೆ ಮುಕ್ತಿ ಸಿಗಲಿ. ಉತ್ತಮ ಜೀವನ ಸಾಗಿಸುವಂಥಾಗಲಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.