
ತೂಬಗೆರೆ : ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ತೂಬಗೆರೆ ಸರ್ಕಾರಿ ಪ್ರೌಢಶಾಲೆ ಸಹಯೋಗದೊಂದಿಗೆ ನಂದಿಬೆಟ್ಟದಲ್ಲಿ ಗಾಂಧಿ ಹೆಜ್ಜೆಗುರುತುಗಳು ಎಂಬ ವಿಷಯದ ಮೇಲೆ ಶಾಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವೇದಿಕೆಯ ಕಾರ್ಯದರ್ಶಿ ಉದಯ್ ಆರಾಧ್ಯ ಬಹುಮಾನ ವಿತರಿಸಿ ಮಾತನಾಡಿ, ಶಾಲೆಗಳಲ್ಲಿ ರಾಜ್ಯ-ರಾಷ್ಟ್ರೀಯ ಹಬ್ಬಗಳು ಕೇವಲ ಮನರಂಜನೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ಅವಕಾಶಗಳಾಗಬೇಕು. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಅತ್ಯಾವಶ್ಯಕ. ಆಶುಭಾಷಣ, ರಸಪ್ರಶ್ನೆಇತ್ಯಾದಿ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
Ad
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಗೀರೀಶ್ ಮಾತನಾಡಿ, ಕನ್ನಡದ ಕುಲಪುರೋಹಿತ ಎಂದು ಕರೆಸಿಕೊಳ್ಳುವ ಆಲೂರು ವೆಂಕಟರಾವ್ ಅವರು 1905ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಗೆ ಮುನ್ನುಡಿ ಬರೆದರು. 1950ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ ಭಾರತದ ವಿವಿಧ ಪ್ರಾಂತ್ಯಗಳು ರಾಜ್ಯಗಳಾಗಿ ರೂಪುಗೊಂಡವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು. ಕರ್ನಾಟಕ ರಾಜ್ಯದ ಮೊದಲ ಹೆಸರು ಮೈಸೂರು ಎಂದಾಗಿತ್ತು. 1973ರ ನವೆಂಬರ್ 1ರಂದು ಮೈಸೂರು ರಾಜ್ಯವು ಕರ್ನಾಟಕ ಎಂಬ ಹೆಸರು ಪಡೆಯಿತು. ಕರ್ನಾಟಕ ಏಕೀಕರಣದ ಮನ್ನಣೆ ಹಲವರಿಗೆ ಸಲ್ಲುತ್ತದೆ. ದೇವರಾಜ ಅರಸ್, ಅನಕೃ, ಕೆ ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎಎನ್ ಕೃಷ್ಣರಾವ್ ಮತ್ತು ಬಿಎಂ ಶ್ರೀಕಂಠಯ್ಯ ಕನ್ನಡ ನಾಡಿಗಾಗಿ ಶ್ರಮಿಸಿದ್ದಾರೆ ಎಂದರು.
ಸಹಶಿಕ್ಷಕ ಮುನಿರಾಜು ಮಾತಾನಾಡಿದ ಇಂದಿನ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ಅತಿಥಿಗಳ ಭಾಷಣ ಹಾಗೂ ಮನರಂಜನೆಗೆ ಸೀಮಿತವಾಗದೆ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳ ಒಳಗೊಳ್ಳುವಿಕೆಯಿಂದ ಅತ್ಯಂತ ಯಶಸ್ವಿಯಾಗಿದೆ. ನವಕರ್ನಾಟಕ ಯುವಶಕ್ತಿ ವೇದಿಕೆಯ ಸಾಮಾಜಿಕ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಶಾಲಾ ಮಕ್ಕಳು ನಡೆಸಿಕೊಟ್ಟ ನಾಟಕ ಮತ್ತು ನೃತ್ಯ ಪ್ರದರ್ಶನ ಆಕರ್ಷಣೀಯವಾಗಿತ್ತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ನೂರ್ ಜಾನ್, ಸದಸ್ಯರಾದ ದೇವರಾಜ್, ಮುಖ್ಯೋಪಾಧ್ಯಾಯರಾದ ಗಿರೀಶ್, ಶಿಕ್ಷಕರಾದ ನಾರಾಯಣಪ್ಪ, ನವಕರ್ನಾಟಕ ಯುವಶಕ್ತಿ ವೇದಿಕೆ ಪದಾಧಿಕಾರಿಗಳು, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವೃಂದ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು.