
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯವನ್ನು ಪಡೆಯಲು ಆರ್ಯ ವೈಶ್ಯ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರಿವು ಯೊಜನೆಯಡಿ ಶೈಕ್ಷಣಿಕ ಸಾಲ ಪಡೆಯಲು ಸಿ.ಇ.ಟಿ./ ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿನಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ 1,00,000 ರೂ.ಗಳ ಸಾಲವನ್ನು ಶೇ.02 ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು.
ವ್ಯಾಸಂಗ ಪೂರ್ಣಗೊಂಡ ನಂತರ 04 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 6,00,000 ರೂ.ಗಳ ಮಿತಿಯೊಳಗಿರಬೇಕು.
ಅರ್ಜಿಗಳನ್ನು ಆನ್ಲೈನ್ kacdc.karnataka.gov.in ಮೂಲಕ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ. 9448451111 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.