
ದೊಡ್ಡಬಳ್ಳಾಪುರ : ತಾಲ್ಲೂಕಿನ ಮಾಚಗೊಂಡನಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಎನ್.ಜಗನ್ನಾಥ್ ಹಾಗೂ ಉಪಾಧ್ಯಕ್ಷರಾಗಿ ಎ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಮಾಚಗೊಂಡನಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ನಾಮಪತ್ರ ಸಲ್ಲಿಸಿದ್ದ ಎನ್ ಜಗನ್ನಾಥ್ ರವರನ್ನು ಅಧ್ಯಕ್ಷರನ್ನಾಗಿ ಹಾಗೂಎ. ಮಂಜುನಾಥ್ ರವರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಎಂ.ನಾಗಭೂಷಣ್ ರವರು ವಿದ್ಯುಕ್ತವಾಗಿ ಘೋಷಿಸಿದರು.
ನೂತನ ಅಧ್ಯಕ್ಷ ಎನ್.ಜಗನ್ನಾಥ್ ಮಾತನಾಡಿ ಮಾಚಗೊಂಡನಹಳ್ಳಿ ಕೃಷಿ ಸಹಕಾರ ಸಂಘ ಹಿಂದೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದು, ನಂತರ ಹೊಸ ನಾಯಕತ್ವದ ಕಾರಣ ಸಂಘಕ್ಕೆ ಮರುಜೀವ ಕೊಟ್ಟು ಸಂಘವು ಸುಸ್ಥಿತಿಗೆ ಬರಲು ಸಾಧ್ಯವಾಯಿತು . ಮುಂಬರುವ ದಿನಗಳಲ್ಲಿ ನನ್ನ ಅಧಿಕಾರಾವಧಿಯಲ್ಲಿ ಸಾರ್ವಜನಿಕರಿಗೆ ಸಮರ್ಪಕ ಪಡಿತರ, ರೈತರಿಗೆ ಸಾಲ ಸೌಲಭ್ಯ, ಬೆಳೆ ಸಾಲ, ಅಲ್ಪಾವದಿ ಸಾಲ, ಸಮರ್ಪಕ ರಸಗೊಬ್ಬರ ವಿತರಣೆ ಸೇರಿದಂತೆ ರೈತ ಪರ ಇನ್ನಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.
ಈಗಾಗಲೇ ನಮ್ಮ ಸಂಘವು ತಾಲೂಕಿನಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ. ಸುಮಾರು ಐದು ಕೋಟಿಯಷ್ಟು ಹಣ ರೈತರಿಗೆ ಸಾಲ ನೀಡಲಾಗಿದೆ. ವಾರ್ಷಿಕ ಹತ್ತು ಲಕ್ಷ ಹಣ ಸರ್ಕಾರದ ಅನುದಾನ ಬರುತ್ತದೆ. ಫುಡ್ ಮಾರಾಟದಲ್ಲೂ ಲಾಭ ಬರುತ್ತಿದೆ. ಸಾಲ ವಸೂಲಾತಿ ಸುಗಮವಾಗಿದ್ದು ಯಾವುದೇ ಸುಸ್ತಿದಾರರಿಲ್ಲದೆ ಸಂಘ ಅತ್ಯಂತ ಸುಸ್ಥಿತಿಯಲ್ಲಿದೆ. ಇದನ್ನು ಇನ್ನಷ್ಟು ಸುಸ್ಥಿತಿಗೆ ತಂದು ಎಲ್ಲರನ್ನು ಪಕ್ಷತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಖ್ಯವಾಗಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಜಗನ್ನಾಥ್ ಹೇಳಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರಾದ ರಾಮಾಂಜಿನಪ್ಪ, ಗೋಪಾಲ್ ರೆಡ್ಡಿ, ರಕ್ಷಿತ್, ವೆಂಕಟೇಶ್, ಮುನಿರಾಜು, ಭಾಗ್ಯಮ್ಮ, ಹಾಗೂ ತೆಂಗು ನಾರಿನ ಮಂಡಳಿ ಅಧ್ಯಕ್ಷರಾದ ಗಂಟಿಗಾನಹಳ್ಳಿ ವೆಂಕಟೇಶ್ ಬಾಬು, ಮಾಜಿ ವಿ. ಎಸ್. ಎಸ್. ಎನ್ ಅಧ್ಯಕ್ಷರಾದ ಮಂಜುನಾಥ್, ಮಂಜುನಾಥ್, ಗಂಟಿಗಾನಹಳ್ಳಿ ಸಂದೀಪ್, ಹೆಗ್ಗಡಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಂಜುಳಾ ಸುರೇಶ, ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ಬೀಡಿಕೆರೆ ಗೌರೀಶ್, ಕುಮಾರ್, ಭಾಸ್ಕರ್ ಮುಕ್ಕೆನಹಳ್ಳಿ, ಮೆಳೇಕೋಟೆ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಶ್ರೀನಿವಾಸ್, ಸಿ, ಏ. ಶ್ರೀನಿವಾಸ್ ಮೂರ್ತಿ ಹಾಗೂ ತಾಲೂಕಿನ ಹಲವಾರು ಮುಖಂಡರು ಅಭಿನಂದಿಸಿದ್ದಾರೆ.