
ದೊಡ್ಡಬಳ್ಳಾಪುರ:ಕನ್ನಡ ನಾಡು ನುಡಿ ಭಾಷೆಗೆ ಅವಹೇಳನಕಾರಿ ರೀತಿಯಲ್ಲಿ ವರ್ತಿಸಿದ ಎಂ ಇ ಎಂ ಪುಂಡರ ವಿರುದ್ಧ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವುದರಿಂದ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡರ ಬಣ)ಯ ಬೆಂಬಲವಿರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ.
ಅವರು ಮಾತನಾಡಿ ಮಾ.21ರಿಂದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮುಖ್ಯ ಪರೀಕ್ಷೆ ಪ್ರಾರಂಭವಾಗುತ್ತಿದ್ದು,ಪರೀಕ್ಷಾ ಸಮಯದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಹಲವು ಸಂಘಟನೆಗಳು ಕರೆದಿರುವ 22 ರ ಶನಿವಾರದ ಕರ್ನಾಟಕ ಬಂದ್ ಗೆ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲ ನೀಡುತ್ತಿಲ್ಲ ಎಂದರು.
ನಮ್ಮ ನಾಡು ನುಡಿ ನೆಲ ಭಾಷೆಗೆ ತೊಂದರೆ ಸಮಯದಲ್ಲಿ ಹಿತ ಕಾಪಾಡುವಲ್ಲಿ ಹೋರಾಟ ಮಾಡುವುದರ ಮೂಲಕ ನಾಡಿನ ರಕ್ಷಣೆ ಕರ್ನಾಟಕ ರಕ್ಷಣಾ ವೇದಿಕೆ ಸದಾ ಹೋರಾಟದ ಮಂಚೂಣಿಯಲ್ಲಿದ್ದು ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ನೇತೃತ್ವದಲ್ಲಿ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದೇವೆ.
ಆದರೆ ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಬಂದ್ ಮಾಡುವುದರಿಂದ ಅನೇಕ ರೀತಿಯಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗಬಹುದು.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಎಂದರು.