
ದೊಡ್ಡಬಳ್ಳಾಪುರ : ಜಮೀನಿನ ಅಧಿಕೃತ ದಾಖಲೆ ಹಾಗೂ ಆಸ್ತಿಗಳ ಮೂಲಕ ನಡೆಸುವ ವಹಿವಾಟುಗಳಿಗೆ ಅಲ್ಲದೇ ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿನ ನಾಗರಿಕರಿಗೆ ಇ-ಖಾತಾದಿಂದ ಹೆಚ್ಚಿನ ಅನುಕೂಲವಾಗಲಿದ್ದು, ಸಾರ್ವಜನಿಕರು ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗದೆ, ಇ ಖಾತಾ ಅಭಿಯಾನದ ಮೂಲಕ ಅರ್ಜಿ ಸಲ್ಲಿಸಿ 30 ದಿನಗಳಲ್ಲಿ ಪಡೆಯಬಹುದಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ 13ನೇ ವಾರ್ಡ್ ಭುವನೇಶ್ವರಿ ನಗರದಲ್ಲಿ ನಗರಸಭೆ ವತಿಯಿಂದ ನಡೆದ ಇ-ಖಾತಾ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಏ.4 ರಿಂದ ಪ್ರಾರಂಭವಾಗಿರುವ ಇ-ಖಾತಾ ಅಭಿಯಾನದಲ್ಲಿ ಸರ್ಕಾರ ಸೂಚಿಸಿರುವ ಐದು ದಾಖಲಾತಿಗಳನ್ನು ಸಲ್ಲಿಸುವ ಮೂಲಕ 30 ದಿನಗಳಲ್ಲಿ ಇ-ಖಾತೆಗಳನ್ನು ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬೇಡಿ. ಎಷ್ಟೋ ಬಿ ಖಾತೆಯ ಆಸ್ತಿಗಳಿಗೆ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಖಾತೆಗೆ ಒಳಪಡದೇ, ದುಪ್ಪಟ್ಟು ತೆರಿಗೆ ಕಟ್ಟಬೇಕಾಗಿರುತ್ತದೆ. ಅಂತಹ ಆಸ್ತಿಗಳು ಇ ಖಾತೆ ಮಾಡಿಸಿಕೊಂಡರೆ ಮಾಮೂಲಿನಂತೆ ತೆರಿಗೆ ಕಟ್ಟಿದರೆ ಸಾಕು. ಆಸ್ತಿಯ ಮೇಲಿನ ಸಾಲ, ಮಾರಾಟ ಮೊದಲಾದ ಸಂದರ್ಭಗಳಲ್ಲಿ ಇ ಖಾತೆಯ ಅವಶ್ಯಕವಿರುತ್ತದೆ. ಭೂಮಿ ಬೆಲೆ ಚಿನ್ನದಂತಾಗಿದ್ದು, ಆಸ್ತಿಗಳನ್ನು ಇಂದು ಮಾರುವುದು ಸುಲಭ ಆದರೆ ಮತ್ತೆ ಪಡೆಯಬೇಕಾದರೆ ಕಷ್ಟಸಾಧ್ಯವಿದೆ. ಆದ್ದರಿಂದ ಯಾರೂ ಆಸ್ತಿಗಳನ್ನು ಮಾರಾಟ ಮಾಡದೇ ಉಳಿಸಿಕೊಂಡು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಕಿವಿ ಮಾತು ಹೇಳಿದರು.
13 ನೇ ವಾರ್ಡ್ ಅಭಿವೃದ್ದಿ:
ವಾರ್ಡ್ನ ನಗರಸಭಾ ಸದಸ್ಯ ಬಂತಿ ವೆಂಕಟೇಶ್ ಮಾತನಾಡಿ, ನೇಕಾರರು ಹೆಚ್ಚಾಗಿರುವ 13ನೇ ವಾರ್ಡ್ ಭುವನೇಶ್ವರಿ ನಗರದಲ್ಲಿ ಇ ಖಾತೆಗಳಾಗದೇ ಸಮಸ್ಯೆಗಳಾಗಿದ್ದು, ಇಂದು ಅದನ್ನು ಪರಿಹರಿಸುವತ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಭುವನೇಶ್ವರಿ ನಗರದ ಮುಖ್ಯರಸ್ತೆಗೆ 28 ಲಕ್ಷ ರೂಗಳು, ನಗರೋತ್ಥಾನದಿಂದ ವಾರ್ಡ್ನಲ್ಲಿ ಡಾಂಬರೀಕರಣ, ಕಾಂಕ್ರಿಟ್ ರಸ್ತೆ ಸೇರಿದಂತೆ 75 ಲಕ್ಷ ರೂಗಳ ಕಾಮಗಾರಿಗಳು ನಡೆಯಲಿವೆ. ಅಂತೆಯೇ ಓವರ್ಹೆಡ್ ಟ್ಯಾಂಕ್ ನಿರ್ಮಾಣ, ಸೇರಿದಂತೆ ನೀರು, ಚರಂಡಿ ಮೊದಲಾದ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಅಲ್ಪ ಸಂಖ್ಯಾತರ ನೀಯಿಂದ 35 ಲಕ್ಷ ರೂ ಕಾಮಗಾರಿಗಳು ನಡೆಯಲಿವೆ ಎಂದರು.
ಇದೇ ವೇಳೆ ಇ ಖಾತೆ ಮಾಡಿಸಿಕೊಂಡ ನಾಗರಿಕರಿಗೆ ನಗರಸಭೆಯಿಂದ ಇ ಖಾತೆಗಳ ಪತ್ರಗಳನ್ನು ಶಾಸಕರು ವಿತರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ ಕೆ.ಆನಂದ್, ಮಾಜಿ ಅಧ್ಯಕ್ಷ ಬಿ.ಮುದ್ದಪ್ಪ, ನಗರಸಭಾ ಸದಸ್ಯ ವೆಂಕಟೇಶ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.