
ನಗರದ ರಾಮೇಗೌಡ ವೃತ್ತದಿಂದ ಟೋಲ್ ಗೇಟ್ ವೃತ್ತ, ನ್ಯಾಷನಲ್ ಪ್ರೈಡ್ ಶಾಲೆಯಿಂದ ಮೇಘಾಂಜಲಿ ವೃತ್ತದವರಗೆ ಕಾಂಕ್ರೀಟ್ ರಸ್ತೆ/ವೈಟ್ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಭೂಮಿ ಪೂಜೆ ನೆರವೇರಿಸಿದರು.
ರಾಷ್ಟ್ರೀಯ ಹೆದ್ದಾರಿ-4 ನೆಲಮಂಗಲದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ರಾ.ಹೆ-7ಕ್ಕೆ ಚಿಕ್ಕಬಳ್ಳಾಪುರ ಸೇರುವ ರಾಜ್ಯ ಹೆದ್ದಾರಿ-74ರ ರಸ್ತೆಯ ಸರಪಳಿ 27.90 ರಿಂದ 31.40ಕಿ.ಮೀಯವರೆಗೆ ಕಾಂಕ್ರೀಟ್ ರಸ್ತೆ/ವೈಟ್ಟಾಪಿಂಗ್ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಭೂಮಿ ಪೂಜೆ ಸಲ್ಲಿಸಿ ಗುದ್ದಲಿ ಪೂಜೆ ಮಾಡುವ ಮೂಲಕ ನೂತನ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿ ಮಾತನಾಡಿದರು. ಎಸ್ ಎಚ್ ಡಿ ಪಿ ಯೋಜನೆ ಅಡಿಯಲ್ಲಿ ನಮ್ಮ ನಗರದ ನಗರಸಭೆ ವ್ಯಾಪ್ತಿಯ ಮೂಲಕ ಹಾದುಹೋಗುವ ಪ್ರಮುಖ ರಸ್ತೆ (ಚಿಕ್ಕಬಳ್ಳಾಪುರದಿಂದ ನೆಲಮಂಗಲ ಸೇರುವ ಮುಖ್ಯರಸ್ತೆ )ಗೆ ವೈಟ್ಟಾಪಿಂಗ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ, ಕಳೆದ ಹತ್ತಾರು ವರ್ಷಗಳಿಂದ ಮಳೆ ಬಂದ ಸಂದರ್ಭದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ನೀರು ನಿಲ್ಲುವ ಸಮಸ್ಯೆ, ಕನ್ನಡ ಜಾಗೃತಿ ಭವನದ ಮುಂಭಾಗ ಒಳಚರಂಡಿ ಸಮಸ್ಯೆ ನಿರಂತರವಾಗಿ ಕಾಣಿಸುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕಾಂಕ್ರೀಟ್ ರಸ್ತೆ/ವೈಟ್ಟಾಪಿಂಗ್ ರಸ್ತೆ ನಿರ್ಮಾಣ ಮಾಡುವ ಮೂಲಕ ಪರಿಹಾರ ದೊರೆಯಲಿದೆ ಎಂದರು.
ಇದೆ ಮೊದಲ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಬಿ ಬಿ ಎಂ ಪಿ ರೀತಿಯಲ್ಲಿ ವೈಟ್ಟಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಮುಂದುವರೆದಂತೆ ಆಲಹಳ್ಳಿ ವರೆಗೂ ದ್ವಿಮುಖ ರಸ್ತೆ ನಿರ್ಮಾಣವಾಗಲಿದೆ, ನಗರಕ್ಕೆ ಪ್ರವೇಶ ಪಡೆಯುವ ನಾಲ್ಕು ದ್ವಾರಗಳಲ್ಲಿಯೂ ದ್ವಿಮುಖ ರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ನಗರ ಬೆಳೆದು ವಾಹನಗಳ ದಟ್ಟಣೆ ಹೆಚ್ಚಾದರೂ ಸಮಸ್ಯೆಯಗದಂತೆ ನಿರ್ವಹಿಸುವ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಅನುಭವದಂತೆ ಖಾತೆ ರಸ್ತೆ ಅಗಲೀಕರಣಕ್ಕೆ ಮಾರಕ
ನಗರ ಸಭೆ ಈ ಹಿಂದೆ ಮಾಡಿರುವ ಮೂಲ ದಾಖಲಾತಿ ಇಲ್ಲದ ಕೆಲವು ಜಾಗಗಳಿಗೆ ಕೆಲ ಬೇಜವಾಬ್ದಾರಿ ಅಧಿಕಾರಿಗಳು ಮಾಡಿಕೊಟ್ಟಿರುವ ಅನುಭವದಂತೆ ಖಾತೆಗಳು ಇಂದು ರಸ್ತೆ ಅಗಲೀಕರಣ ಮಾಡಲು ಸಮಸ್ಯೆ ಆಗಿದೆ,ಭೂ ಮಾಲೀಕರಿಗೆ ಪರಿಹಾರ ಧನ ನೀಡುವ ಜವಾಬ್ದಾರಿ ಸ್ಥಳೀಯ ಆಡಳಿತ ವಹಿಸಬೇಕಾಗುತ್ತದೆ, ಆದರೆ ದೊಡ್ಡಬಳ್ಳಾಪುರ ನಗರಸಭೆಯ ಆದಾಯ 8 ಕೋಟಿ ಖರ್ಚು 14 ಕೋಟಿ ಇದೆ, ರಸ್ತೆ ಅಗಲೀಕರಣ ವಿಚಾರವಾಗಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರವು ವಿಶೇಷ ಅನುದಾನ ನೀಡುವ ಮೂಲಕ ಸಹಕರಿಸಲಿ ಈಗಾಗಲೇ ಬಿ ಎಂ ಆರ್ ಡಿ ಎ ಅಧಿಕಾರಿ ರಾಜೇಂದ್ರ ಚೋಳನ್ ರವರಿಗೆ ಪತ್ರದ ಮೂಲಕ ಮಾಹಿತಿ ತಿಳಿಸಿ ಮನವಿ ಮಾಡಿದ್ದು , ಮಾನ್ಯ ಉಪಮುಖ್ಯಮಂತ್ರಿಗಳಿಗೂ ಪತ್ರದ ಮೂಲಕ ಮನವಿ ಸಲ್ಲಿಸಲಿದ್ದೇನೆ , ನಗರದ ಒಳಿತಿಗಾಗಿ ವಿಶೇಷ ಅನುದಾನದ ಅಡಿಯಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರವು ಅನುದಾನ ನೀಡುವ ಮೂಲಕ ರಸ್ತೆ ಅಗಲೀಕರಣದ ಪ್ರಕ್ರಿಯೆಗೆ ಸಹಕರಿಸಲಿ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷರಾದ ಸುಮಿತ್ರ ಆನಂದ್, ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕುಮಾರ್, ನಗರಸಭೆ ಸದಸ್ಯರಾದ ಬಂತಿ ವೆಂಕಟೇಶ್, ಶಿವು, ಎಂಜಿ ಶ್ರೀನಿವಾಸ, PWD ಎಇಇ ಪುರುಷೋತ್ತಮ, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಮುದ್ದಪ್ಪ,ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖರಾದ ವಾಣಿ ನಂದಕುಮಾರ್, ಪ್ರಿಯಾಂಕಾ ಮೋಹನ್, ಸಂಜು, ಸೇರಿದಂತೆ ಇದ್ದರು.