
ವಿಕಾಸ ಸೌಧದಲ್ಲಿ ಇಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಜಾಗೃತಿ ಸಮಿತಿಯ ಸಭೆ ನಡೆಯಿತು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ – 2013ರಡಿಯಲ್ಲಿ ರೂಪಿಸಿರುವ ಜಾಗೃತಿ ಸಮಿತಿಗಳ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದವು.
ಕರ್ನಾಟಕ ಸರ್ಕಾರವು ಹೊರಡಿಸಿದ ಅಧಿಸೂಚನೆಯಂತೆ “ನಿರ್ದಿಷ್ಟ ಗುರುತುಯುಳ್ಳ ಸಾರ್ವಜನಿಕ ವಿತರಣಾ ಪದ್ದತಿ ನಿಯಮ – 2016” ರಚಿಸಿ ರಾಜ್ಯದಲ್ಲಿ ನಾಲ್ಕು ಹಂತಗಳಲ್ಲಿ ಜಾಗೃತಿ ಸಮಿತಿಗಳನ್ನು ಸ್ಥಾಪಿಸಲು
1. ರಾಜ್ಯ ಮಟ್ಟದ ಜಾಗೃತಿ ಸಮಿತಿ
2. ಜಿಲ್ಲಾ ಮಟ್ಟದ ಜಾಗೃತಿ ಸಮಿತಿ
3. ತಾಲೂಕು ಮಟ್ಟದ ಜಾಗೃತಿ ಸಮಿತಿ
4. ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿ ರಚಿಸಲಾಯಿತು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳ ಅವಧಿ ಎರಡು ವರ್ಷಗಳಾಗಿದ್ದು, ನ್ಯಾಯಬೆಲೆ ಅಂಗಡಿ ಮಟ್ಟದ ಸಮಿತಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಜಾಗೃತಿ ಸಭೆಯನ್ನು ನಡೆಸಲಾಗಿದೆ.ನಮ್ಮ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ, ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದು, ಈ ಯೋಜನೆಯು ಬಡವರ ಹೊಟ್ಟೆ ತುಂಬಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.
ರಾಜ್ಯ ಮಟ್ಟದ ಜಾಗೃತಿ ಸಮಿತಿಯನ್ನು ರಚಿಸಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಅವುಗಳ ಅನುಷ್ಠಾನವಾಗದ ಜಿಲ್ಲೆಗಳ ಪಟ್ಟಿಯನ್ನು ನೀಡುವಂತೆ ಸೂಚನೆ ನೀಡಿದರು.
ಈಗಾಗಲೇ ರಚನೆಯಾಗಿರುವ ತಾಲ್ಲೂಕು ಮಟ್ಟದ ಸಮಿತಿಗಳು ಹೆಚ್ಚು ಚುರುಕಾಗಿ ಕಾರ್ಯನಿರ್ವಹಿಸಬೇಕು.ತಾವು ಜಾಗೃತಿ ಸಮಿತಿಯ ಸದಸ್ಯರಾಗಿ, ಕ್ಷೇತ್ರದ ಮಟ್ಟದಲ್ಲಿ ಹೆಚ್ಚಿನ ಕೆಲಸ ಮಾಡಿ ಇಲಾಖೆಯ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಬಡವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದು, ಯೋಜನೆಯ ಅನುಷ್ಠಾನದಲ್ಲಿ ಜಾಗೃತಿ ಸಮಿತಿಯ ಸದಸ್ಯರು ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಗಮನದಲ್ಲಿಟ್ಟು, ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ತುಕಾರಾಂ, ವಿಧಾನಸಭಾ ಸದಸ್ಯರಾದ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ತಿನ ಸದಸ್ಯರಾದ ಬಸವನಗೌಡ ಬಾದರ್ಲಿ, ಹಾಗೂ ಸದಸ್ಯರು ಮತ್ತು ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತರಾದ ವಾಸಿರೆಡ್ಡಿ ವಿಜಯಜೋತ್ನಾ, ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.