
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಭವಿಷ್ಯ ಹಿನ್ನಡೆಯಾಗುತ್ತದೆ ಎಂಬ ಪೋಷಕರ ಧೋರಣೆ ಬೇಸರದ ಸಂಗತಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸರ್ಕಾರಿ ಶಾಲೆ ಉಳಿಸಿ – ಕನ್ನಡ ಬೆಳೆಸಿ” ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.
“ನಾನು ಸಹ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿ. ಪ್ರಾಥಮಿಕದಿಂದ ಹತ್ತನೇ ತರಗತಿವರೆಗೆ ಕನ್ನಡದಲ್ಲೇ ಓದಿದ್ದೇನೆ. ಕನ್ನಡ ಮಾಧ್ಯಮ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನುಭವ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಓದಿ ಯುಪಿಎಸ್ಸಿ ಸೇರಿದಂತೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಇದು ಮಾತೃಭಾಷೆಯಲ್ಲಿಯೇ ಉನ್ನತ ವಿದ್ಯೆ ಸಾಧಿಸಬಹುದೆಂಬ ಜೀವಂತ ಸಾಕ್ಷ್ಯ,” ಎಂದರು.
ಅವರು ಮುಂದುವರೆದು, “ಸರ್ಕಾರಿ ಶಾಲೆಗಳಲ್ಲಿ ಇಂದು ಅಗತ್ಯ ಮೂಲಸೌಕರ್ಯಗಳು ಲಭ್ಯವಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ ಪಡೆದರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ಸಿಗಬಹುದು. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಜಾಗರೂಕರಾಗಬೇಕು, ಆದರೆ ಭಾಷೆಯ ಆಧಾರದ ಮೇಲೆ ಶಾಲೆ ಆಯ್ಕೆ ಮಾಡುವ ಧೋರಣೆಗೆ ತಡೆವಿಡಬೇಕು. ಈ ಕುರಿತು ಜಾಗೃತಿ ಮೂಡಿಸಲು ನವ ಕರ್ನಾಟಕ ಯುವಶಕ್ತಿ ವೇದಿಕೆ ಆರಂಭಿಸಿರುವ ‘ಸರ್ಕಾರಿ ಶಾಲೆ ಉಳಿಸಿ – ಕನ್ನಡ ಬೆಳೆಸಿ’ ಅಭಿಯಾನ ಶ್ಲಾಘನೀಯ,” ಎಂದರು.
ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಕೆಲ ಖಾಸಗಿ ಶಾಲೆಗಳ ಅತಿಯಾದ ಶುಲ್ಕ, ಸಾರಿಗೆ ವೆಚ್ಚ, ಪಠ್ಯವಸ್ತುಗಳ ದುಬಾರಿ ಬೆಲೆ, ಕಳಪೆ ಶಿಕ್ಷಣ ಹಾಗೂ ಪರೋಕ್ಷ ವಾಣಿಜ್ಯೀಕರಣದ ಪರಿಣಾಮವಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಪಾಲಕರು ತೀವ್ರ ಆರ್ಥಿಕ ಒತ್ತಡ ಅನುಭವಿಸುತ್ತಿದ್ದಾರೆ. ಇದರ ನಡುವೆ ಕೆಲ ಜಾಗೃತ ಪಾಲಕರು ಸಮಾಜದ ಬದಲಾವಣೆಗೆ ಮಾದರಿಯಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ನವ ಕರ್ನಾಟಕ ಯುವಶಕ್ತಿ ವೇದಿಕೆ ಇಂತಹ ಮುಂದಾಳು ಪೋಷಕರು ಹಾಗೂ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇತರರಿಗೆ ಸಕಾರಾತ್ಮಕ ಸಂದೇಶ ನೀಡಲು ಯೋಜನೆ ರೂಪಿಸಿದೆ,” ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಮಾತಾನಾಡಿ “ಇದು ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಪ್ರಯತ್ನ. ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಜನತೆಗೆ ತಿಳಿಸಿ, ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಈ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ರಮದಿಂದ ಮಕ್ಕಳ ಮನೋಬಲ ಹೆಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿರೈತ ಅಂಬರೀಶ್ ಮತ್ತು ಪದಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ, ನಿವೃತ್ತ ಅರೆಸೇನಾ ಯೋಧರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಂತರಾಜ್ ಗೋಪಾಲ್, ಹಿರಿಯ ಮಾಧ್ಯಮ ವರದಿಗಾರ ಗಂಗರಾಜು, ಕನ್ನಡ ಪರ ಹೋರಾಟಗಾರ ತೂಬಗೆರೆ ಷರೀಫ್, ಕನ್ನಡ ಸಾಹಿತ್ಯ ಪರಿಷತ್ ತೂಬಗೆರೆ ಹೋಬಳಿಯ ಅಧ್ಯಕ್ಷ ಕುಮಾರ್, ಮುಖ್ಯಶಿಕ್ಷಕ ವಸಂತ ಕುಮಾರ್ ಗೌಡ, ರಾಧಾಕೃಷ್ಣ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ ಟಿ ಎನ್, ಮಂಜುಳಾ ರಾಜಕುಮಾರ್, ನಾಗೇಶ್, ಯುವ ಮುಖಂಡರು ನರಸಿಂಹಮೂರ್ತಿ, ನಾಗರಾಜು ನಾಗೇನಹಳ್ಳಿ, ಮುಬಾರಕ್ ಷರೀಫ್, ಶ್ರೀಧರ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.