
ದೊಡ್ಡಬಳ್ಳಾಪುರ : ಇನ್ನೇನು ರಸ್ತೆ ಅಗಲೀಕರಣದ ಕಾಮಗಾರಿ ಮುಗಿದೆ ಹೋಯಿತು ಎನ್ನುವಷ್ಟರಲ್ಲಿ ಸ್ಥಳೀಯ ಕೆಲ ರೈತರ ಆಕ್ರೋಶದಿಂದ ಕಾಮಗಾರಿಯು ಅರ್ಧಕ್ಕೆ ನಿಂತಿದೆ.
ವರದನಹಳ್ಳಿಯ ಕೆಲ ದಲಿತ ಹಾಗೂ ಹಿಂದುಳಿದ ವರ್ಗಗಳ ರೈತರು ರಸ್ತೆ ಅಗಲೀಕರಣದ ನೆಪದಲ್ಲಿ ನಾವು ಉಳುಮೆ ಮಾಡುತ್ತಿರುವ ಭೂಮಿಯನ್ನು ಆಕ್ರಮಿಸಲಾಗುತ್ತಿದೆ ಎಂದು ಸ್ಥಳೀಯ ಮುಖಂಡರ ವಿರುದ್ಧ ಆರೋಪ ಮಾಡಿದ್ದಾರೆ.
ತಾಲೂಕಿನ ವರದನಹಳ್ಳಿ ಮೂಲಕ ಕೋಳಿಪಾಳ್ಯಕ್ಕೆ ಸೇರುವ ನಕಾಶೆ ರಸ್ತೆಯನ್ನು ಅಗಲೀಕರಣ ಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮದ ಯುವಕರು ಮುಂದಾಗಿದ್ದು , ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೆ ತಾವೇ ಹಣ ಒಟ್ಟುಗೂಡಿಸಿ ಕಾಮಗಾರಿಗೂ ಮುಂದಾಗಿದ್ದರು, ಆದರೆ ಸ್ಥಳೀಯವಾಗಿ ದಲಿತ ಕುಟುಂಬಗಳು ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ಜಮೀನಿನಲ್ಲಿ ರಸ್ತೆ ಅಗಲೀಕರಣಕ್ಕೆ ಜಾಗ ಪಡೆದಿದ್ದು ಸ್ಥಳೀಯ ಕೆಲ ರೈತರ ಆಕ್ರೋಶಕ್ಕೆ ಕಾರಣವಾಗಿದೆ .
ಕೇವಲ 5 – 10 ಗುಂಟೆ ಜಾಗದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳು ನಮ್ಮದಾಗಿದ್ದು, ಸ್ಥಳೀಯವಾಗಿ ನಾವೇನೂ ರಸ್ತೆ ಅಗಲೀಕರಣ ಮಾಡುವಂತೆ ಕೇಳಿಲ್ಲ, ಆದರೂ ಗ್ರಾಮದ ಕೆಲವು ಮುಖಂಡರು ಬೇಕಂತಲೇ ನಮ್ಮ ಜಮೀನಿನಿಂದ ಅಭಿವೃದ್ಧಿ ಮಾಡುತ್ತಿವೆ ಎಂಬ ನೆಪದಲ್ಲಿ ಜಾಗ ಕಸಿಯಲು ಮುಂದಾಗಿದ್ದಾರೆ , ನಾವು ಯಾವುದೇ ಕಾರಣಕ್ಕೂ ಜಾಗ ಕೊಡುವುದಿಲ್ಲ ಎಂದು ಸ್ಥಳೀಯ ದಲಿತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ನಂದಗುಂದಿ ವೆಂಕಟೇಶ್ ಮಾತನಾಡಿ ಸ್ಥಳೀಯ ರೈತರು ನಮಗೆ ದೂರು ನೀಡಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ , ಇಲ್ಲಿ ಕೇವಲ ದಲಿತರ ಜಮೀನು ಅಷ್ಟೇ ಅಲ್ಲದೆ , ಹಿಂದುಳಿದ ಸಮುದಾಯಗಳ ಜಮೀನಲ್ಲಿ ಜೆಸಿಪಿ ಬಳಸಿ ಟ್ರಚ್ ಒಡೆಯಲಾಗಿದೆ. ವಾಸ್ತವಿಕವಾಗಿ ಈಗಾಗಲೇಸುಮಾರು 20 ಅಡಿಯ ರಸ್ತೆ ಇದ್ದು ಅದನ್ನು ಅಗಲೀಕರಣ ಗೊಳಿಸಲು ಕೆಲವರು ಮುಂದಾಗಿದ್ದಾರೆ , ರೈತರಿಗೆ ಅನ್ಯಾಯವಾದಲ್ಲಿ ನಮ್ಮ ಪಕ್ಷ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಸ್ಥಳೀಯವಾಗಿ ರೈತರ ಸಮಸ್ಯೆ ಒಟ್ಟಿಗೆ ನಾವಿದ್ದೇವೆ , ರೈತರ ಜೀವನಾಧಾರವಾಗಿರುವ ಭೂಮಿ ಉಳಿಸುವುದು ನಮ್ಮ ಆದ್ಯ ಕರ್ತವ್ಯ , ಅವಶ್ಯಕತೆ ಇಲ್ಲದ ರಸ್ತೆ ಮಾಡುವುದು ಅನಗತ್ಯ ಎಂದರು.
ಸ್ಥಳೀಯ ಮುಖಂಡರಾದ ಕಸವನಹಳ್ಳಿ ಅಂಬರೀಶ್ ಮಾತನಾಡಿ ಗ್ರಾಮದ ಎಲ್ಲಾ ರೈತರ ಸಮ್ಮತಿಯ ಮೇರೆಗೆ ಎಲ್ಲರ ಸಮಕ್ಷಮದಲ್ಲಿ ರಸ್ತೆ ಅಗಲೀಕರಣ ಮಾಡುವ ನಿರ್ಣಯ ಕೈಗೊಳ್ಳಲಾಯಿತು. ಆದರೆ ಇಂದು ಕೆಲವರು ನಮಗೆ ತಿಳಿದೇ ಇಲ್ಲ ಎಂದು ಹೇಳುತ್ತಿದ್ದಾರೆ , ರಸ್ತೆ ಅಗಲೀಕರಣ ಮಾಡುವುದರಿಂದ ಗ್ರಾಮಸ್ಥರಿಗೆ, ಸ್ಥಳೀಯ ರೈತರಿಗೆ, ಸಾಕಷ್ಟು ಅನುಕೂಲಗಳಾಗಲಿವೆ . ಸ್ಥಳೀಯ ಗ್ರಾಮದ ಸ್ಮಶಾನಕ್ಕೆ ಸೇರುವ ಈ ರಸ್ತೆಯಲ್ಲಿ ಹೊಂಗೆ ಮರಗಳು ಹೆಚ್ಚಾಗಿ ಬೆಳೆದಿವೆ, ಆದಕಾರಣ ಶಾಲಾ ವಾಹನಗಳು, ಇತರೆ ಬಾರಿ ವಾಹನಗಳು ಸಂಚರಿಸುವುದು ಕಷ್ಟ ಎಂಬ ನಿಟ್ಟಿನಲ್ಲಿ ಎಲ್ಲ ಗ್ರಾಮಸ್ಥರ ಅಭಿಪ್ರಾಯದ ಮೇರೆಗೆ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದೆವು , ರಸ್ತೆ ಅಗಲೀಕರಣ ಬೇಡ ಎಂಬ ನಿರ್ಧಾರದೊಂದಿಗೆ ಸ್ಥಳೀಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ರೈತರಿಗೆ ಅರಿವಾಗಬೇಕಿರುವುದು ಏನೆಂದರೇ ರಸ್ತೆ ಅಗಲೀಕರಣದಿಂದ ಅವರ ಜಮೀನಿಗೆ ಹೆಚ್ಚು ಲಾಭದಾಯಕ ಎಂಬುದು , ಇನ್ನೇನು ಕೆಲಸ ಎರಡು ದಿನಗಳಿಗೆ ಮುಗಿದೇ ಹೋಗುತ್ತಿತ್ತು ಅಷ್ಟರಲ್ಲಿ ಸ್ಥಳೀಯ ಕೆಲ ಗ್ರಾಮಸ್ಥರು, ರೈತರ ಈ ವರ್ತನೆ ಬೇಸರ ಉಂಟು ಮಾಡಿದೆ . ಈ ಕುರಿತು ಸಂಪೂರ್ಣ ವಿಚಾರಣೆ ಮಾಡಿ ಅಧಿಕಾರಿಗಳೇ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು.
ಸ್ಥಳೀಯ ರೈತ ಕೆಂಪಯ್ಯ ಮಾತನಾಡಿ ನಾವೇನು ರೋಡ್ ಬೇಕು ಅಂತ ಕೇಳಿಲ್ಲ, ಏಕಾಏಕಿ ಜೆಸಿಪಿ ತಗೊಂಡು ಬಂದು ನಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಮೀನಿನಲ್ಲಿ ದೌರ್ಜನ್ಯವೆಸಗಿದ್ದಾರೆ, ನಮಗೆ ರಕ್ಷಣೆ ಬೇಕು ಅಂದರು.
ಸ್ಥಳೀಯ ಮುಖಂಡರಾದ ಮುನೀಂದ್ರ ಮಾತನಾಡಿ ಸ್ಥಳೀಯವಾಗಿ ರಸ್ತೆ ಅಗಲೀಕರಣ ನೆಪದಲ್ಲಿ ರಸ್ತೆ ಬದಿಯಿಂದ ಮರಗಳು ಸಂಪೂರ್ಣ ಹಾಳಾಗಿವೆ, ಯಾವುದೇ ಆದೇಶ ಅನುಮತಿ ಇಲ್ಲದೆ ರಸ್ತೆ ಅಗಲೀಕರಣ ಸರಿಯಲ್ಲ ಈ ಕುರಿತು ಸೂಕ್ತ ತನಿಖೆಯಾಗಲಿ ಅಧಿಕಾರಿಗಳು ರೈತರ ಪರ ಧ್ವನಿಯಾಗಿ ಶ್ರಮಿಸಲಿ ಎಂದರು.
ಸ್ಥಳೀಯ ರೈತ ಬೈರೇಗೌಡ ಮಾತನಾಡಿ ರಸ್ತೆ ಅಗಲೀಕರಣ ಯಾರೊಬ್ಬರ ವೈಯಕ್ತಿಕ ಲಾಭಕ್ಕಾಗಿ ಮಾಡುತ್ತಿರುವುದಲ್ಲ ಇದು ಎಲ್ಲರ ಹಿತಕ್ಕಾಗಿ ಕೈಗೊಂಡಿರುವ ಕಾಮಗಾರಿ , ಇದನ್ನು ಗ್ರಾಮದ ಗ್ರಾಮಸ್ಥರು ರೈತರು ಅರಿತುಕೊಳ್ಳಬೇಕಿದೆ. ರಸ್ತೆ ಅಗಲೀಕರಣದಿಂದ ಯಾರೊಬ್ಬರಿಗೂ ಸಮಸ್ಯೆ ಆಗುವುದಿಲ್ಲ , ಇಲ್ಲಿ ಯಾವುದೇ ರೀತಿಯ ದೌರ್ಜನ್ಯವಾಗಿಲ್ಲ ರೈತರ ಒಳಿತಿಗಾಗಿ ರಸ್ತೆ ಅಗಲೀಕರಣ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.