
ದೊಡ್ಡಬಳ್ಳಾಪುರ: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಗಸ್ಟ್ 1ರಂದು ದಲಿತ ಸಮುದಾಯದ ಮುಖಂಡರಿಂದ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಬಚ್ಚಹಳ್ಳಿ ನಾಗರಾಜು ತಿಳಿಸಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿವಿವಿಧ ದಲಿತ ಸಂಘಟನೆಗಳ ಮುಖಂಡರಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದ್ದರು ಈವರೆಗೂ ನಮ್ಮ ರಾಜ್ಯದಲ್ಲಿ ಯಾವುದೇ ಒಣ ಮೀಸಲಾತಿ ಘೋಷಣೆಯಾಗಿಲ್ಲ , ಚುನಾವಣೆಗೂ ಮುನ್ನ ಒಳ ಮೀಸಲಾತಿ ನೀಡುವ ಭರವಸೆ ನೀಡಿದ್ದ ಸಿದ್ದರಾಮಯ್ಯನವರು ಈಗ ಮರೆತಿದ್ದಾರೆ ಎನಿಸುತ್ತದೆ, ಈಗಾಗಲೇ ಸಮೀಕ್ಷೆಗೂ ಮುಂದಾಗಿರುವ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಮೀನಾ-ಮೇಷ ಎಣಿಸುತ್ತಿರುವುದು ಸರಿಯಲ್ಲ ನಮ್ಮ ತಾಳ್ಮೆಗೂ ಮಿತಿ ಇದೆ . ಆಗಸ್ಟ್ 1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಎಲ್ಲ ದಲಿತಪರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಾದಿಗ ಸಮುದಾಯದ ಎಲ್ಲಾ ಬಂಧುಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ. ಸರ್ಕಾರ ಕೂಡಲೇ ಎಚ್ಚೆದ್ದು ಆಗಸ್ಟ್ 12ರಂದು ನಡೆಯುವ ಸಚಿವ ಸಂಪುಟದ ಒಳಗಾಗಿ ವಿಶೇಷ ಸಂಪುಟ ಸಭೆಯನ್ನು ಕರೆಯುವ ಮೂಲಕ ನಮ್ಮ ಒಳ ಮೀಸಲಾತಿರ ಘೋಷಣೆ ಮಾಡಲಿ ಇಲ್ಲವಾದಲ್ಲಿ ಆಗಸ್ಟ್ 16ರ ನಂತರ ರಾಜ್ಯಾದ್ಯಂತ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಸಮುದಾಯದ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ದೊಡ್ಡ ತುಮಕೂರು ವೆಂಕಟೇಶ್ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳ ಭರವಸೆ ಮಾತಿಗೆ ಕಾದು ಕಾದು ಸಾಕಾಗಿದೆ, ನಮ್ಮ ತಾಳ್ಮೆಗೂ ಮಿತಿ ಇದೆ ನಾವು ಕೇಳುತ್ತಿರುವುದು ನಮ್ಮ ಹಕ್ಕು, ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ನಮ್ಮಗೆ ಒಳ ಮೀಸಲಾತಿ, ಈ ಕೂಡಲೇ ಕಲ್ಪಿಸಬೇಕು , ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರಕ್ಕೆ ಒಳ ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಗಳಿಗೆ ಕೊಟ್ಟಿರುವ ಮಾತು ಮರೆತಿದೆ ಇನ್ನಾದರೂ ಮಾನ್ಯ ಮುಖ್ಯಮಂತ್ರಿ ಎಚ್ಚೆತ್ತು ದಲಿತ ಸಮುದಾಯಗಳಿಗೆ ಸೇರಬೇಕಿರುವ ಸೂಕ್ತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದರು.
ದಲಿತ ಮುಖಂಡ ಅಪ್ಪಕಾರಹಳ್ಳಿ ಹನುಮಣ್ಣ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳೇ ಮೀಸಲಾತಿ ನಮ್ಮ ಹಕ್ಕು, ಮೀಸಲಾತಿಯನ್ನ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ,ಮೀಸಲಾತಿ ನೀವು ನಮಗೆ ಕೊಡುವ ಭಿಕ್ಷೆಯಲ್ಲ ಅದು ಸಂವಿಧಾನ ನಮಗೆ ನೀಡಿರುವ ಗೌರವ, ಈ ಕೂಡಲೇ ನಮ್ಮ ಮೀಸಲಾತಿಯನ್ನು ನಮಗೆ ನೀಡದ ಪಕ್ಷದಲ್ಲಿ ಇಂದಿನಿಂದಲೇ ನಾವು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ಕೊಟ್ಟು ಅರಿವು ಮೂಡಿಸುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಟಿ. ಡಿ ಮುನಿಯಪ್ಪ ಮಾತನಾಡಿ ದೇಶದಲ್ಲಿ ಶೋಷಿತ ಸಮುದಾಯಗಳ ಬಗ್ಗೆ ಅರಿತ ಸುಪ್ರೀಂ ಕೋರ್ಟ್ ಜನಸಂಖ್ಯೆ ಆಧಾರದ ಮೇಲೆ ತಮ್ಮ ತಮ್ಮ ರಾಜ್ಯಗಳಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೂಕ್ತ ಒಳ ಮೀಸಲಾತಿ ಕಲ್ಪಿಸಿ ಎಂದು 2024ರ ಆಗಸ್ಟ್ 1ರಂದು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದ್ದು, ಆದೇಶ ನೀಡಿ ಈಗಾಗಲೇ ಒಂದು ವರ್ಷ ಪೂರ್ಣಗೊಳ್ಳುವ ಹಂತ ತಲುಪಿದೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಒಳಬಹಿಸಲಾತಿ ಜಾರಿಯಾಗಿದ್ದು ನಮ್ಮ ಕರ್ನಾಟಕದಲ್ಲಿ ಜಾರಿಯಾಗದೇ ಇರುವುದು ದುರದೃಷ್ಟವೇ ಸರಿ , ಚುನಾವಣೆಗೂ ಮುನ್ನ ನಾವು ದಲಿತರ ಪರ ಒಳ ಮೀಸಲಾತಿ ಜಾರಿಗೊಳಿಸಿ ತೀರುತ್ತೇವೆ ಎಂದಿದ್ದ ಮಾನ್ಯ ಮುಖ್ಯಮಂತ್ರಿಗಳು ಸುಮ್ಮನಿದ್ದಾರೆ, ಈ ಧೋರಣೆ ನಾವು ಸಹಿಸುವುದಿಲ್ಲ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾದಿಗ ಸಮುದಾಯ ಮಾಡಲಿದೆ , ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಆಗಸ್ಟ್ 1ರಂದು ಅರಬೆತ್ತಲೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ನಮ್ಮ ಒಳ ಮೀಸಲಾತಿ ನಮಗೆ ನೀಡಲಿ ಎಂದರು .
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ತಳಗವಾರ ನಾಗರಾಜ್, ಕುಂಬಾರಪೇಟೆ ನಾರಾಯಣಪ್ಪ, ಹರ್ಷ ಹಾದ್ರಿಪುರ, ಕಾಂತರಾಜ್ ರಾಜಘಟ್ಟ, ನರಸಪ್ಪ ಗುಂಡುಮಗೆರೆ, ಗಂಗರಾಜು ನರಸಿಂಹನಹಳ್ಳಿ, ಕದಿರಪ್ಪ ಗಂಗಸಂದ್ರ, ಮುನಿಯಪ್ಪ ಕರೀಂಸೊಣ್ಣೆನಹಳ್ಳಿ, ಮುತ್ತುರಾಜ್ ಸುಲ್ಕುಂಟೆ, ಕೆ ವಿ ಮುನಿಯಪ್ಪ, ನರೇಂದ್ರ ಮಾಡೇಶ್ವರ, ಮಂಜುನಾಥ ನಾಯಕರಂಡಹಳ್ಳಿ, ಮೂರ್ತಿ ಮುತ್ತೂರು, ರವಿಕುಮಾರ್ ಹಾಲೇನಹಳ್ಳಿ, ಎಂಡಿ ನರಸಿಂಹಮೂರ್ತಿ, ಕನ್ನಡ ಪಕ್ಷ ವೆಂಕಟೇಶ್, ರಾಮಮೂರ್ತಿ( ರಾಾಮು ನೇರಳೆ ಘಟ್ಟ ), ಮುನಿರಾಜು ಸಿದ್ದನಾಯಕನಹಳ್ಳಿ, ಶ್ರೀರಾಮ್ ಮದುರೆ, ಗಜೇಂದ್ರ ಬೈಪ್ಪನಹಳ್ಳಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.