
ಬೆಂಗಳೂರು ಗ್ರಾಮಾಂತರ ಜಿಲ್ಲೆ( ಬೀರಸಂದ್ರ) ವಿಜಯ ಮಿತ್ರ ಸುದ್ದಿ :: ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ ಈವರೆಗೂ ನಮ್ಮ ರಾಜ್ಯದಲ್ಲಿ ಯಾವುದೇ ಒಳ ಮೀಸಲಾತಿ ಘೋಷಣೆಯಾಗಿಲ್ಲ , ಆಗಸ್ಟ್ 15ರಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಂತಿಮ ಗಡುವು ನೀಡುತ್ತಿದ್ದು, ಒಳ ಮೀಸಲಾತಿ ಜಾರಿ ಮಾಡುವ ಮೂಲಕ ಮಾದಿಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಬೇಕು , ಯಾವುದೇ ಹೆಚ್ಚಿನ ವಿಳಂಬಕ್ಕೆ ಆಸ್ಪದ ನೀಡದೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಸಂಪೂರ್ಣವಾಗಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು. ಒಂದು ವೇಳೆ ಸರ್ಕಾರವು ಈ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಗುಳ್ಳಳ್ಳಿ ರಾಜಣ್ಣ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕಿನಿಂದ ಮಾದಿಗ ಸಮುದಾಯದ ಮುಖಂಡರು ಅರೆಬೆತ್ತಲೆಯಾಗಿ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಾಲ್ಕು ತಾಲೂಕುಗಳ ಮಾದಿಗ ಸಮುದಾಯದ ಪ್ರಮುಖರು ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಚುನಾವಣೆಗೂ ಮುನ್ನ ಒಳ ಮೀಸಲಾತಿ ನೀಡುವ ಭರವಸೆ ನೀಡಿದ್ದ ಸಿದ್ದರಾಮಯ್ಯನವರು ಈಗ ಯಾವುದೇ ನಿರ್ಣಯ ಕೈಗೊಳ್ಳದೆ ಇರುವುದು ಮಾದಿಗ ಸಮುದಾಯ ಕುರಿತು ಅವರ ಬದ್ಧತೆಯನ್ನು ತೋರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಎಲ್ಲ ದಲಿತಪರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಾದಿಗ ಸಮುದಾಯದ ಎಲ್ಲಾ ಬಂಧುಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರಕ್ಕೆ ಆಗಸ್ಟ್ 15ರ ಗಡುವು ನೀಡುತ್ತಿದ್ದು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೊಳಿಸಿ ಸೂಕ್ತ ನ್ಯಾಯ ಕಲ್ಪಿಸದ ಪಕ್ಷದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದು ಅಷ್ಟೇ ಅಲ್ಲದೆ ನಾವು ಪ್ರಾಣತ್ಯಾಗಕ್ಕೂ ಸಿದ್ಧ ಎಂದರು.
ನಮಗೆ ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಯಾವುದೇ ಭಾಗ್ಯಗಳು ಬೇಡ ನಮಗೆ ನಮ್ಮ ಹಕ್ಕು ಒಳ ಮೀಸಲಾತಿ ಕೊಟ್ಟರೆ ಸಾಕು, ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ನಮ್ಮ ಮಾದಿಗ ಸಮುದಾಯ ಹಿಂದುಳಿದಿದ್ದು ಒಳ ಮೀಸಲಾತಿ ಸಿಗುವ ಮೂಲಕ ನಮ್ಮ ಜನಾಂಗ ಸಾಕಷ್ಟು ಲಾಭ ಪಡೆಯಲಿದೆ ಸರ್ಕಾರ ಇದನ್ನು ಅರಿಯಬೇಕಿದೆ ನಮ್ಮ ಹಕ್ಕನ್ನು ನಮಗೆ ಕೊಡಿ ನಿಮ್ಮ ಪುಕ್ಕಟ್ಟೆ ಭಾಗ್ಯ ನಮಗೆ ಬೇಡ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಮ ಮೂರ್ತಿ ( ರಾಮು) ನೇರಳೆಘಟ್ಟ ಮಾತನಾಡಿ ಈಗಾಗಲೇ ಸಮೀಕ್ಷೆ ಸಂಪೂರ್ಣ ಮುಗಿದಿದೆ ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ನಮ್ಮ ತಾಳ್ಮೆ ಪರೀಕ್ಷಿಸುತ್ತಿದೆ. ಇಂದು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ, ಇಂದಿನ ಪ್ರತಿಭಟನೆ ಕೇವಲ ಸಾಂಕೇತಿಕವಷ್ಟೇ ಸರ್ಕಾರ ಕೂಡಲೇ ನಮ್ಮ ಒಳ ಮೀಸಲಾತಿರ ಘೋಷಣೆ ಮಾಡಲಿ ಇಲ್ಲವಾದಲ್ಲಿ ಆಗಸ್ಟ್ 15 ನಂತರ ರಾಜ್ಯಾದ್ಯಂತ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಸಮುದಾಯದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.
ನಾವು ಕೇಳುತ್ತಿರುವುದು ನಮ್ಮ ಹಕ್ಕು, ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ನಮ್ಮಗೆ ಒಳ ಮೀಸಲಾತಿ, ಈ ಕೂಡಲೇ ಕಲ್ಪಿಸಬೇಕು , ಇನ್ನಾದರೂ ಮಾನ್ಯ ಮುಖ್ಯಮಂತ್ರಿ ಎಚ್ಚೆತ್ತು ದಲಿತ ಸಮುದಾಯಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದರು.
ದಲಿತ ಮುಖಂಡ ಟಿ ಡಿ ಮುನಿಯಪ್ಪ ಮಾತನಾಡಿ ಇದು ಕೇವಲ ಆರಂಭವಷ್ಟೇ ನಮ್ಮ ಒಳ ಮೀಸಲಾತಿಯನ್ನು ನಮಗೆ ಕೊಟ್ಟುಬಿಡಿ ಇಂದು ಕೇವಲ ನಾಲ್ಕು ತಾಲೂಕುಗಳ ಮಾದಿಗ ಸಮುದಾಯದ ಸಾವಿರಾರು ಜನರು ಪ್ರತಿಭಟನೆಗೆ ಮುಂದಾಗಿದ್ದೇವೆ . ಒಳ ಮೀಸಲಾತಿ ಜಾರಿಗೊಳಿಸದೆ ಹೋದಲ್ಲಿ ಆಗಸ್ಟ್ 15ರಂದು ರಾಜ್ಯಾದ್ಯಂತ ಕೋಟ್ಯಾಂತರ ಮಾದಿಗ ಸಮುದಾಯದ ಜನತೆ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆಗೆ ಮುಂದಾಗಲಿದ್ದಾರೆ . ಸರ್ಕಾರವನ್ನು ಅಧಿಕಾರಕ್ಕೆ ತರುವ ಶಕ್ತಿ ಇರುವ ನಮಗೆ ಅದನ್ನು ಕೆಡವಿ ಮತ್ತೊಂದು ಸರ್ಕಾರ ಜಾರಿಗೆ ತರುವ ಶಕ್ತಿ ಕೂಡ ಇದೆ . ಮಾನ್ಯ ಮುಖ್ಯಮಂತ್ರಿಗಳು ಇದನ್ನು ಅರಿತು ಶೀಘ್ರ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ತಳಗವಾರ ನಾಗರಾಜ್, ಕುಂಬಾರಪೇಟೆ ನಾರಾಯಣಪ್ಪ, ಹರ್ಷ ಹಾದ್ರಿಪುರ, ಕಾಂತರಾಜ್ ರಾಜಘಟ್ಟ, ನರಸಪ್ಪ ಗುಂಡುಮಗೆರೆ, ಗಂಗರಾಜು ನರಸಿಂಹನಹಳ್ಳಿ, ಕದಿರಪ್ಪ ಗಂಗಸಂದ್ರ, ಮುನಿಯಪ್ಪ ಕರೀಂಸೊಣ್ಣೆನಹಳ್ಳಿ, ಮುತ್ತುರಾಜ್ ಸುಲ್ಕುಂಟೆ, ಕೆ ವಿ ಮುನಿಯಪ್ಪ, ನರೇಂದ್ರ ಮಾಡೇಶ್ವರ, ಮಂಜುನಾಥ ನಾಯಕರಂಡಹಳ್ಳಿ, ಮೂರ್ತಿ ಮುತ್ತೂರು, ರವಿಕುಮಾರ್ ಹಾಲೇನಹಳ್ಳಿ, ಎಂಡಿ ನರಸಿಂಹಮೂರ್ತಿ, ಕನ್ನಡ ಪಕ್ಷ ವೆಂಕಟೇಶ್, ರಾಮಮೂರ್ತಿ( ರಾಾಮು ನೇರಳೆ ಘಟ್ಟ ), ಮೈಲಾರಪ್ಪ, ನರಸಿಂಹಮೂರ್ತಿ ದೊಡ್ಡಕುಕ್ಕನ ಹಳ್ಳಿ, ನಾಗರತ್ನಮ್ಮ ಮಲ್ಲೋಹಳ್ಳಿ, ಉಮಾದೇವಿ, ಮಹೇಂದ್ರ, ಜಾಲಗೆರೆ ಕೃಷ್ಣಪ್ಪ, ಜೇಮ್ಸ್, ನರಸಿಂಹಯ್ಯ, ಮುನಿರಾಜು ಸಿದ್ದನಾಯಕನಹಳ್ಳಿ, ಶ್ರೀರಾಮ್ ಮದುರೆ, ಗಜೇಂದ್ರ ಬೈಪ್ಪನಹಳ್ಳಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.