
ದೊಡ್ಡಬಳ್ಳಾಪುರ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಆಸ್ಪತ್ರೆಯಲ್ಲಿ ವೈದ್ಯರು ಸಿಬ್ಬಂದಿಗಳ ಕೊರತೆಯ ಜೊತೆಗೆ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ ಈ ಕೂಡಲೇ ಲೋಪ ದೋಷಗಳು ಸರಿಪಡಿಸಲು ಆಂತರಿಕ ಸಲಹಾ ಸಮಿತಿಯನ್ನು ರಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಎಂದು ಒತ್ತಾಯಿಸಿ ಮೂಲಕ ಯುವ ಸಂಚಲನ ತಂಡದ ಪ್ರಮುಖರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆಗಸ್ಟ್ 6 ರಂದು ವೈದ್ಯರ ನಿರ್ಲಕ್ಷದಿಂದ ತಾಯಿ ಮತ್ತು ಮಗು ಸಾವನಪ್ಪಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಯುವ ಸಂಚಲನ ತಂಡವು ಜಿಲ್ಲಾ ವೈದ್ಯಾಧಿಕಾರಿ ಭೇಟಿ ಮಾಡಿ ಹಲವು ಆರೋಪಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದೆ .
ಈ ಕುರಿತು ಯುವ ಸಂಚಲನ ತಂಡದ ಪ್ರಮುಖರಾದ ಚಿದಾನಂದಮೂರ್ತಿ ವಿಜಯ ಮಿತ್ರ ವೆಬ್ ನ್ಯೂಸ್ ಜೊತೆಗೆ ಮಾತನಾಡಿ ನಮ್ಮ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಗರ್ಭಿಣಿ ಸ್ತ್ರೀಯರಿಗೆ ಆತ್ಮಸ್ಥೈರ್ಯ ತುಂಬಿ ಹೆರಿಗೆ ಮಾಡಬೇಕಾದ ವೈದ್ಯರು, ಸಿಬ್ಬಂದಿ ವರ್ಗ ಆಸ್ಪತ್ರೆಯಲ್ಲಿ ಸೂಕ್ತ ಶಸ್ತ್ರಚಿಕಿತ್ಸೆಗಳ ಲಭ್ಯವಿಲ್ಲ , ಸ್ಕ್ಯಾನಿಂಗ್ ಲಭ್ಯವಿಲ್ಲ, ಔಷಧಿಗಳು ಲಭ್ಯವಿಲ್ಲ, ಎಂದು ಹೇಳುವ ಮೂಲಕ ಸಾಮಾನ್ಯ ಚಿಕಿತ್ಸೆಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಚಿಕಿತ್ಸೆ ನೀಡಬೇಕಾದ ವೈದ್ಯರೇ ಭ್ರಷ್ಟಾಚಾರಕ್ಕೆ ಒಳಗಾಗಿ ರೋಗಿಗಳ ಸಂಬಂಧಿಕರ ಬಳಿ ಇಲ್ಲಸಲ್ಲದ ನಾನಾ ಕಾರಣಗಳನ್ನು ಹೇಳಿ ಪರೋಕ್ಷವಾಗಿ ಹತ್ತು ಇಪ್ಪತ್ತು ಸಾವಿರ ರೂಪಾಯಿಗಳ ವರೆಗೆ ಹಣ ಕೇಳಿ ಪಡೆಯುವ ಅಭ್ಯಾಸವಾಗಿದೆ. ನಾರ್ಮಲ್ ಹೆರಿಗೆ ಒಂದು ಮೊತ್ತ, ಎಷ್ಟೋ ಚಿಕಿತ್ಸೆಗೆ ಒಂದು ಮೊತ್ತ ಎಂಬ ಮಾತು ಸಾಮಾಜಿಕ ವಲಯಗಳಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಬಾಣಂತಿಯರಿಗೆ ಕುಡಿಯುವ ಬಿಸಿನೀರು ವ್ಯವಸ್ಥೆ ಇಲ್ಲದಿರುವುದು ಒಂದು ಸಮಸ್ಯೆಯಾದರೆ, ಹೆರಿಗೆ ಬರುವ ಗರ್ಭಿಣಿಯರಿಗೆ ಧೈರ್ಯ ತುಂಬಿಸಿ ನಾರ್ಮಲ್ ಹೆರಿಗೆ ಮಾಡುವ ಬದಲಾಗಿ ಹೆಚ್ಚಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿರುವುದರಿಂದ ಮಹಿಳೆಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇವು ಪ್ರಸೂತಿಯಲ್ಲಿ ವಿಭಾಗದ ಕೆಲವು ಪ್ರಮುಖ ಕಾರ್ಯ ಸಮಸ್ಯೆಗಳಾಗಿದ್ದು ಕೂಡಲೇ ಆಂತರಿಕ ಸಲಹಾ ಸಮಿತಿಯನ್ನು ರಚಿಸುವ ಮೂಲಕ ಆಸ್ಪತ್ರೆ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.