
ದೊಡ್ಡಬಳ್ಳಾಪುರ:ಸ್ವಾಭಿಮಾನ ಹಾಗೂ ಜನ್ಮಭೂಮಿಯ ಅಭಿಮಾನದ ವಿಚಾರದಲ್ಲಿ ರಾಯಣ್ಣ ಇತರರಿಗೆ ಮಾದರಿ ಹಾಗೂ ದೇಶಾಭಿಮಾನ ದೇಶಭಕ್ತಿ ನಿಷ್ಠೆ ಪ್ರಾಮಾಣಿಕತೆ, ಶೌರ್ಯ ಸಾಹಸಕ್ಕೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಎಂದು ಪ್ರಗತಿಪರ ಚಿಂತಕ ನಿಕೇತ್ ರಾಜ್ ಮೌರ್ಯ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಹಕಾರ ಸಂಘವತಿಯಿಂದ ನೆಡೆದ ಕುರುಬ ಸಮಾಜದ ಹತ್ತನೇ ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಸ್ವತಂತ್ರ ಚಳುವಳಿಯ ಪ್ರಾರಂಭವಾಗುವ ದಶಕಗಳ ಹಿಂದೆಯೇ ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದು ರಾಯಣ್ಣ. ಅದರಲ್ಲೂ ಪ್ರಥಮ ಗಂಡು ಮೆಟ್ಟಿದ ನೆಲದಲ್ಲಿ ಎನ್ನುವುದು ವಿಶೇಷ, ಆದರೆ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿದ ನಂತರ ನಡೆದ ಚಳುವಳಿಯಲ್ಲಿ ಹೋರಾಟ ಮಾಡಿ ಹುತಾತ್ಮರಾದ ಬೇರೆ ರಾಜ್ಯದ ಹೋರಾಟಗಾರರನ್ನು ಇತಿಹಾಸ ತಜ್ಞರು ಇತಿಹಾಸದಲ್ಲಿ ನಮೂದಿಸಿದರು. ದುರಂತವೆಂದರೆ ಸ್ವಾತಂತ್ರ್ಯ ಚಳುವಳಿಗೆ ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಚಾಲನೆ ನೀಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿ ಗಲ್ಲಿಗೇರಿದ ರಾಯಣ್ಣನನ್ನು ಇತಿಹಾಸಕಾರರು ಗುರುತಿಸಲಿಲ್ಲ ಎಂದರು.
ಹೊರ ರಾಜ್ಯಗಳ ಚಳುವಳಿಗಾರರನ್ನು ದೇಶದ ಎಲ್ಲೆಡೆ ಬಿಂಬಿಸಿದ ಇತಿಹಾಸ ತಜ್ಞರೆನಿಸಿಕೊಂಡವರು ಕನ್ನಡಿಗ ಅದರಲ್ಲೂ ಹಿಂದುಳಿದ ಕುರುಬ ಸಮಾಜದ ರಾಯಣ್ಣನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ನಿಜಕ್ಕೂ ಬೇಸರದ ಸಂಗತಿಯೇ ಸರಿ ಎಂದು ನಿಕೇತ್ ರಾಜ್ ಮೌರ್ಯ ಬೇಸರ ವ್ಯಕ್ತಪಡಿಸಿದರು.
ರಾಯಣ್ಣ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಸಂತಸದ ಸಂಗತಿ.ಹಾಗೆಯೇ ವಿದ್ಯಾರ್ಥಿಗಳು ಕೂಡಾ ರಾಯಣ್ಣನ ನಿಷ್ಠೆ, ದೇಶಪ್ರೇಮ, ಸ್ವಾಭಿಮಾನವನ್ನು ಆದರ್ಶವಾಗಿಟ್ಟುಕೊಂಡು ದೇಶದ ಸತ್ವಜೆ ಗಳಾಗಿ ರೂಪು ಗೊಳ್ಳಬೇಕಿದೆ. ಶಿಕ್ಷಣದಲ್ಲಿ ಅಂಕ ಮುಖ್ಯವಲ್ಲ. ಶಿಕ್ಷಣದಲ್ಲಿ ಹೆಚ್ಚಿನ ಅಂಕ ಗಳಿಸುವುದರ ಜೊತೆಗೆ ಹುಟ್ಟಿದ ಸಮಾಜಕ್ಕೆ ನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷರು, ಹಾಗು ಅಖಿಲ ಭಾರತೀಯ ಪಶುಪಾಲ ಕ್ಷತ್ರಿಯರ ಟ್ರಸ್ಟ್ ಕುರುಬ / ಋಷಿ ಇತಿಹಾಸ ಮತ್ತು ಪರಂಪರೆ ಸಂಶೋಧಕ. ತಜ್ಞ ಗಿರಿಧರ್ ತಿಮ್ಮಪ್ಪ ನಾಯಕ ಮಾತನಾಡಿ, ಕುರುಬ ಸಮಾಜದ ಮೂಲವನ್ನು ಹುಡುಕಿಕೊಂಡು ಹೊರಟರೆ ಆಫ್ರಿಕಾ, ಹರಪ್ಪ ಮಹಾಂಜೊದಾರೋ ಘಟನೆಗಳಲ್ಲಿ ಕುರುಬರ ಇತಿಹಾಸ ಕಾಣ ಸಿಗುತ್ತದೆ. ಆಫ್ರಿಕಾ ಖಂಡದಲ್ಲಿ ಪಶುಪಾಲಕರನ್ನು ಕುರುಮ್ಬರ್ ಎಂದೇ ಕರೆಯುತ್ತಿದ್ದುದು ಇತಿಹಾಸ. ಇದರರ್ಥ ಬರಿ ಕುರಿ ಕಾಯುವನು ಮಾತ್ರ ಕುರುಬನಲ್ಲ ದನಗಾಹಿ, ಹೈನುಗಾರಿಕೆ, ಕೃಷಿಯಲ್ಲಿ ತೊಡಗಿರುವವರೆಲ್ಲ ಕುರುಬರೇ ಎಂದು ಅರ್ಥ ಎಂದು ವಿದೇಶಿ ಇತಿಹಾಸಗಳಲ್ಲಿ ಅಡಕವಾಗಿದೆ ಹೀಗಾಗಿ ಕುರುಬ ಸಮಾಜಕ್ಕೆ ವಿಶೇಷವಾದ ಇತಿಹಾಸವಿದೆ. ಹಾಗಾಗಿ ಸಮಾಜದವರು ಮೊದಲು ಇತಿಹಾಸವನ್ನು ಅರಿತು ತಮ್ಮ ಮುಂದಿನ ಪೀಳಿಗೆಗಯವರಿಗೆ ಕುರುಬರ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ನೀಡುವ ಕಾರ್ಯ ಶ್ಲಾಘನೀಯ ಇಂತಹ ಕಾರ್ಯವನ್ನು ಪ್ರತಿ ವರ್ಷ ಹಮಿಕೊಳ್ಳುತ್ತಿರುವ ಕಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಅಭಿನಂದನಾರ್ಹರು. ಇಂತಹ ಪ್ರೋತ್ಸಾಹ ದಾಯಕ ಕಾರ್ಯಕ್ರಮಗಳಿಗೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
ಕುರುಬ ಸಮಾಜಕ್ಕೆ ಜಮೀನು ಮಂಜೂರು ವಿಚಾರದಲ್ಲಿ ನಾಲೈದು ವರ್ಷಗಳ ಹಿಂದೆಯೇ ಪ್ರಯತ್ನಿಸಲಾಗಿತ್ತು. ಆದರೆ ಗುರುತಿಸಿದ ಜಾಗ ನಗರ ವ್ಯಾಪ್ತಿಗೆ ಬರುವುದರಿಂದ ಜಮೀನು ಕೈತಪ್ಪಲು ಕಾರಣವಾಯಿತು. ಪ್ರಸ್ತುತ ಕುರುಬ ಸಮಾಜದ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಆಗಿರುವುದರಿಂದ ಬೇರೆ ಜಾಗವನ್ನು ಗುರ್ತಿಸಿ ಸಮಾಜಕ್ಕೆ ದಕ್ಕುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತಿಸುತ್ತೇನೆ. ಹಿಂದುಳಿದ ವರ್ಗಗಳ ಎಲ್ಲಾ ಸಮಾಜಗಳ ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ ಕಾರ್ಯ ಪ್ರವೃತ್ತನಾಗುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, ಬಡವರ ಪರ ಕಾಳಜಿ ಇರುವ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಯಾಗಿರುವುದು ಹೆಮ್ಮೆಯ ಸಂಗತಿ ಅದರಲ್ಲೂ ಸಿದ್ದರಾಮಯ್ಯನವರು ಕುರುಬ ಸಮಾಜದವರೆಂಬುದು ಗಮನಾರ್ಹ ವಾದುದು. ಕುರುಬ ಸಮಾಜದ ಅಶೋತ್ತರಗಳಿಗೆ ನನ್ನ ಅಧಿಕಾರಾವಧಿಯಲ್ಲಿ ಪೂರಕವಾಗಿ ಕೆಲಸ ಮಾಡಿದ್ದೇನೆ. ಸಮುದಾಯಕ್ಕೆ ಜಮೀನು ಮಂಜೂರಾತಿ ವಿಚಾರದಲ್ಲಿ ಈಗಾಗಲೇ ಹಲವಾರು ಬಾರಿ ಪ್ರಯತ್ನಿಸಿದ್ದು ಸಮುದಾಯದ ನಾಯಕರಿಂದ ಸರಿಯಾದ ಸಹಕಾರ ಸಿಗಲಿಲ್ಲ. ಈಗ ಸಮಾಜದ ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಮುಖ್ಯಮಂತ್ರಿಯವರ ಬಳಿ ಖುದ್ದು ಮಾತನಾಡಿ ಜಮೀನು ಮಂಜೂರಾತಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇದು ನಿರಂತರವಾಗಿ ನಡೆಯಲು ಸಮಾಜದ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಸಮಾಜದ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಖಜಾಂಚಿ ಕೆ. ಎಂ. ಕೃಷ್ಣಮೂರ್ತಿ, ನಗರಸಭೆ ಉಪಾಧ್ಯಕ್ಷ ಎಂ. ಮಲ್ಲೇಶ್, ತೂಬಗೆರೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಅರಳು ಮಲ್ಲಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಲೇಶ್, ಕೆಂಪಣ್ಣ, ಆಲಳ್ಳಿ ಚಂದ್ರು, ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಎ. ಕೃಷ್ಣ ಮೂರ್ತಿ, ಲಾವಣ್ಯ ಕಾಲೇಜಿನ ಪ್ರಾಮುಪಾಲ ಎಂ.ಸಿ. ಮಂಜುನಾಥ್, ನಗರಸಭಾ ಸದಸ್ಯ ಚಂದ್ರಮೋಹನ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ರವಿ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಪಟೇಲ್ ಮುನಿರಾಜು, ಪಾಪಣ್ಣ, ಎಲ್. ಗಂಗರಾಜು, ಜಿ.ಎನ್. ವೆಂಕಟೇಶ್, ಆಟೋ ಮಂಜು, ಕೃಷ್ಣಮೂರ್ತಿ, ಮಾಧವಿ, ಗಜಲಕ್ಷ್ಮಿ, ಮುತ್ತು ರಾಜ್ ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.