ದೊಡ್ಡಬಳ್ಳಾಪುರ : ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಫಲವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಈ ಹಿನ್ನಲೆ ಮಾದಿಗ ಸಮುದಾಯದ ಮುಖಂಡರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ನೆಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿಯನ್ನು ಮಾದಿಗ ಸಮುದಾಯದ ಮುಖಂಡರು ಸ್ವಾಗತಿಸಿದರು.
ಇದೇ ವೇಳೆ ಮುಖಂಡರಾದ ರಾಮಕೃಷ್ಣಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲೇ ಒಳ ಮೀಸಲಾತಿ ಜಾರಿ ಮಾಡುವುದ್ದಾಗಿ ಭರವಸೆ ನೀಡಿತ್ತು. ಅದರಂತೆ ಆಗಸ್ಟ್ 19ರ 2025ರಲ್ಲಿ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ ಎಂದರು.
101 ಜಾತಿಗಳಲ್ಲಿ ಮಾದಿಗ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಬಗ್ಗೆ ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿಯೂ ಉಲ್ಲೇಖವಾಗಿದೆ.
ನಾಗಮೋಹನ್ ದಾಸ್ ವರದಿಯಲ್ಲಿ ಪರಿಶಿಷ್ಟ ಜಾತಿಗಳನ್ನ 5 ಭಾಗಗಳಾಗಿ ವಿಂಗಡಿಸಿದ್ದರು, ಸರ್ಕಾರ 3 ಭಾಗಗಳಾಗಿ ವಿಂಗಡಿಸಿ ಒಳ ಮೀಸಲಾತಿ ಜಾರಿ ಮಾಡಿದೆ. ಅತಿ ಹಿಂದುಳಿದ ಜಾತಿಗಳಾಗಿ ಎಡಗೈ ಮತ್ತು ಸಂಬಂಧಿತ ಜಾತಿಗಳನ್ನ ಪವರ್ಗ 1ಕ್ಕೆ ಸೇರಿಸಿ ಶೇಕಡಾ 6ರಷ್ಟು ಮೀಸಲಾತಿ ನೀಡಲಾಗಿದೆ, ಬಲಗೈ ಮತ್ತು ಸಂಬಂಧಿತ ಜಾತಿಗಳನ್ನ ಪವರ್ಗ 2 ಗೆ ಸೇರಿಸಲಾಗಿದ್ದು ಶೇಕಡಾ 6 ರಷ್ಟು ಮೀಸಲಾತಿ ಮತ್ತು ಸ್ಪೃಷ್ಯ ಮತ್ತು ಅಲೆಮಾರಿ ಜಾತಿಗಳಿಗನ್ನ ಪವರ್ಗ 3ರಲ್ಲಿ ಶೇಕಡಾ 5 ರಷ್ಟು ಮೀಸಲಾತಿಯನ್ನ ಘೋಷಣೆ ಮಾಡಲಾಗಿದೆ.
ದೇವರಾಜು ಅರಸುರವರು ಮಾಡಿದ ಒಂದು ಸಣ್ಣ ತಪ್ಪಿನಿಂದ ಸ್ಪೃಷ್ಯ ಜಾತಿಗಳನ್ನ ಎಸ್ಸಿ ಪಟ್ಟಿಗೆ ಸೇರಸಲಾಗಿತು. ಅಲೆಮಾರಿ ಸಮುದಾಯ ಇವತ್ತು ಸ್ಪೃಷ್ಯ ಜಾತಿಗಳನ್ನೊಂದಿಗೆ ಪೈಪೋಟಿ ಮಾಡಲು ಸಾಧ್ಯವಿಲ್ಲ, ಅವರಿಗೆ ಶೇಕಡಾ 1 ರಷ್ಟು ಮೀಸಲಾತಿಯನ್ನ ನೀಡ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಗೈ ಮತ್ತು ಎಡಗೈ ಸಮುದಾಯದ ನಾಯಕರೊಂದಿಗೆ ಚರ್ಚಿಸುತ್ತಿದ್ದು, ಅಲೆಮಾರಿ ಸಮುದಾಯಕ್ಕೆ 1ರಷ್ಟು ಮೀಸಲಾತಿ ಸಿಗುವ ಸಾಧ್ಯತೆ ಇದೆ ಎಂದರು .
ನಾಗರಾಜು ಬಚ್ಚಹಳ್ಳಿ ಮಾತನಾಡಿ , ನಾಗಮೋಹನ್ ದಾಸ್ ಕೊಟ್ಟ ವರದಿಯನ್ನ ಸರ್ಕಾರ ಗಾಳಿಗೆ ತೂರಿ ವೊಲೈಕೆ ರಾಜಕೀಯ ಮತ್ತು ಸಮುದಾಯದ ವೋಟ್ ಬ್ಯಾಂಕ್ ಗಾಗಿ ಮಣಿದಿದೆ. ಅಲೆಮಾರಿಗಳು ನಮಗಿಂತ ಕೆಟ್ಟ ಸ್ಥಿತಿಯಲ್ಲಿದ್ದಾರೆ, ಅವರನ್ನ ಸ್ಪೃಶ್ಯ ಜಾತಿಗಳಿಗೆ ಸೇರಿಸಿದ್ದಾರೆ, ಜನಸಂಖ್ಯೆಯಲ್ಲಿ ಹೆಚ್ಚಿರುವು ನಾವೇ ಅವರೊಂದಿಗೆ ಹೋರಾಟ ಮಾಡಿಕೊಂಡು ಬಂದಿದ್ದೇವೆ, ಈ ಇಂತಹ ಪರಿಸ್ಥಿತಿಯಲ್ಲಿ ಅಲೆಮಾರಿಗಳು ಸ್ಪೃಷ್ಯ ಜಾತಿಗಳೊಂದಿಗೆ ಸ್ವರ್ಥಿಸಲು ಸಾಧ್ಯವೇ ಎಂದರು
ದೇವರಾಜು ಅರಸು ನಂತರ ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರ ಕಣ್ಣಿಗೆ ಪೊರೆ ಬಂದಿದೇಯಾ, ಒಳ ಮೀಸಲಾತಿ ಕಾನೂನು ಆಗುವ ಮುನ್ನವೇ ಅಲೆಮಾರಿಗಳನ್ನ ಪವರ್ಗ 1ಕ್ಕೆ ಸೇರಿಸ ಬೇಕು, ಸೇರಿಸದಿದ್ದರೆ ಉಗ್ರ ಹೋರಾಟ ಮಾಡುವುದ್ದಾಗಿ ಹೇಳಿದರು.
ಅಪ್ಪಕಾರನಹಳ್ಳಿ ಹನುಮಯ್ಯ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಿದೆ, ಆದರೆ ನಮಗೆ ಸಿಗಬೇಕಾದ ಪಾಲು ನಮಗೆ ಸಿಕ್ಕಿಲ್ಲ, ಶೇಕಡಾ 1 ರಷ್ಟು ಕಡಿಮೆ ಮೀಸಲಾತಿ ಸಿಕ್ಕಿರುವುದು ವೈಯಕ್ತಿವಾಗಿ ನನಗೆ ಬಹಳ ನೋವಿದೆ. 35 ವರ್ಷಗಳ ಕಾಲ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ನಾವು ಕೃತಜ್ಞತೆ ಸಲ್ಲಿಸಬೇಕು, ನಮ್ಮ ಅವಿರತ ಹೋರಾಟದ ಫಲ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ ಎಂದರು.

ಮುಖಂಡರಾದ ವೆಂಕಟೇಶ್ ಮಾತನಾಡಿ, ಒಳ ಮೀಸಲಾತಿಯ ಕೂಗು ಪ್ರಾರಂಭವಾಗಿದ್ದು ದಲಿತ ಮುಖಂಡರಾದ ಮಂದ ಕೃಷ್ಣ ಮಾದಿಗರವರಿಂದ, ರಾಜ್ಯದಲ್ಲಿ ಮಾದಿಗ ದಂಡೋರ ಹೋರಾಟಗಾರರ ಶ್ರಮದಿಂದ ಹೋರಾಟ ತೀರ್ವ ಸ್ವರೂಪವನ್ನ ಪಡೆಯಿತು, ಸ್ವಂತ ಕೆಲಸ ಬಿಟ್ಟು ಹೋರಾಟ ಮಾಡಿದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಕೆ.ಎಚ್.ಮುನಿಯಪ್ಪ. ಹೆಚ್.ಆಂಜನೇಯ, ಹಾಲ್ಕೋಡ್ ಹನುಮಂತಪ್ಪ, ನಾರಾಯಣಸ್ವಾಮಿಯವರ ಹೋರಾಟ ಸಹ ಒಳ ಮೀಸಲಾತಿ ಜಾರಿಯಾಗಲು ಕಾರಣವಾಗಿದೆ ಅವರಿಗೂ ಅಭಿನಂದನೆ ಸಲ್ಲಿಸುವುದ್ದಾಗಿ ಹೇಳಿದರು.
ವಕೀಲರಾದ ಕಾಂತರಾಜು ಮಾತನಾಡಿ, ಒಳ ಮೀಸಲಾತಿಗೆ ಕಳೆದ 35 ವರ್ಷಗಳ ಹೋರಾಟ ಮಾಡಿದ ಸಮುದಾಯ ಮತ್ತು ಮೂರು ದಿನ ಹೋರಾಟ ಮಾಡಿದ ಸಮುದಾಯಕ್ಕೆ ಸಮವಾಗಿ ಶೇಕಡಾ 6ರಷ್ಟು ಮೀಸಲಾತಿಯನ್ನ ನೀಡಿರುವುದು ಅನ್ಯಾಯ, ನಮ್ಮ ಹೋರಾಟದಲ್ಲಿ ಮಡಿದವರಿಗೆ ಸಿಕ್ಕ ಫಲವೇ ಇದು. ನಮಗೆ ಇದು ತೃಪ್ತಿ ನೀಡಿಲ್ಲ, ಮತ್ತೆ ಹೋರಾಟ ಮಾಡುವ ಶಕ್ತಿ ಇಲ್ಲದ ಕಾರಣಕ್ಕೆ ಇದನ್ನೇ ಒಪ್ಪಿಕೊಳ್ಳುತ್ತೇವೆ. ಅಲೆಮಾರಿಗಳ ಸಿಗಬೇಕಾದ 1ರಷ್ಟು ಮೀಸಲಾತಿಯನ್ನ ಕಿತ್ತುಕೊಳ್ಳಲಾಗಿದೆ, ಅವರಿಗೆ 1 ರಷ್ಟು ಮೀಸಲಾತಿಯನ್ನ ಕೊಡುವವರೆಗೂ ಮಾದಿಗ ಸಮುದಾಯ ಅವರೊಂದಿಗೆ ಇರುವುದ್ದಾಗಿ ಹೇಳಿದರು.
ರಾಮಾಮೂರ್ತಿ (ರಾಮು) ನೇರಳಘಟ್ಟ ಮಾತನಾಡಿ, ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸುವೆ. ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿ ಅನ್ಯಾಯದಿಂದ ಕೂಡಿದೆ, ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಲಾಗಿದೆ, ಅವರಿಗೆ ಒಳ ಮೀಸಲಾತಿ ಸಿಕ್ಕಾಗ ಮಾತ್ರ ನಾವು ಖುಷಿಯಿಂದ ಆಚರಿಸುತ್ತವೆ ಎಂದರು.

ತಳವಾರ ನಾಗರಾಜು ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನ ನೀಡದೆ, ಬಲಾಢ್ಯರ ಒತ್ತಡಕ್ಕೆ ಮಣಿದು ಒಳ ಮೀಸಲಾತಿಯನ್ನ ನೀಡಿರುವುದು ನಮಗೆ ಬಹಳ ನೋವು ತಂದಿದೆ, ನಮ್ಮ ಪಾಲು ನಮಗೆ ನೀಡಿದ್ದಾರೆ ನಮ್ಮ ಮಾದಿಗ ಸಮುದಾಯ ನಿಮ್ಮನ್ನು ರಾಜರಂತೆ ಮೇರೆಸುತ್ತಿದ್ದೇವು. ಅದರೆ ಸಂಭ್ರಮಾಚರಣೆ ಮಾಡುವ ಮನಸ್ಸು ನಮಗಿಲ್ಲ, ಈ ನೋವಿನಲ್ಲೇ ನಾವು ಒಳ ಮೀಸಲಾತಿಯನ್ನ ಒಪ್ಪಿಕೊಳ್ಳುತ್ತಿದ್ದೇವೆ ಎಂದರು.
ಟಿ.ಡಿ.ಮುನಿಯಪ್ಪ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿರುವುದು ನಮಗೆ ಖುಷಿ ಇದೆ. ಆದರೆ ಖುಷಿಯಲ್ಲಿಯೂ ನೋವಿದೆ, ನಮ್ಮ ಪಾಲು ನಮಗೆ ಸಿಕ್ಕಿಲ್ಲ, ಸಿಕ್ಕಿರುವ ಪಾಲನ್ನು ನಾವು ಸ್ವೀಕರಿಸುತ್ತೇವೆ. ಒಳ ಮೀಸಲಾತಿಗಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ರಾಜಕೀಯ ನಾಯಕರು, ಹೋರಾಟಗಾರರು ಮತ್ತು ಅಧಿಕಾರಿಗಳಿಗೆ ವಿಶೇಷ ಕೃತಜ್ಞತೆಯನ್ನ ಸಲ್ಲಿಸುತ್ತೇವೆ ಎಂದರು.
ಶಿವಣ್ಣ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ, ಸರ್ಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರರವರ ಶ್ರಮ ಸಹ ಇದೆ, ಒಳ ಮೀಸಲಾತಿಯನ್ನ ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವನ್ನ ದೊಡ್ಡಬಳ್ಳಾಪುರಕ್ಕೆ ಕರೆಸಿ ಅವರಿಗೆ ಸನ್ಮಾನಿಸುವ ಮೂಲಕ ನಾವು ಕೃತಜ್ಞತೆ ಸಲ್ಲಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜು ಬಚ್ಚಹಳ್ಳಿ, ರಾಮಕೃಷ್ಣಪ್ಪ ದೊಡ್ಡ ತುಮಕೂರು, ವೆಂಕಟೇಶ್ ದೊಡ್ಡತುಮಕೂರು, ಹನುಮಣ್ಣ ಅಪಕಾರನಹಳ್ಳಿ, ಟಿ ಡಿ ಮುನಿಯಪ್ಪ, ಗಂಗರಾಜು ನರಸಿಂಹನಹಳ್ಳಿ, ರಾಮು ನೇರಳಘಟ್ಟ, ನರಸಪ್ಪ ಗುಂಡುಮಗೆರೆ , ಮೈಲಾರಪ್ಪ ಎಸ್ ನಾಗೇನಹಳ್ಳಿ, ತಳವಾರ ನಾಗರಾಜು, ಕೆ ನಾರಾಯಣಪ್ಪ, ಹರ್ಷ ಹಾದ್ರಿಪುರ, ಕಾಂತರಾಜು ರಾಜಘಟ್ಟ, ಮುನಿಯಪ್ಪ ಕರೀಂ ಸೊಳ್ಳೆನಹಳ್ಳಿ, ಗಂಗರಾಜು ತಿಪ್ಪಾಪುರ ಹಾಜರಿದ್ದರು.
