ದೊಡ್ಡಬಳ್ಳಾಪುರ : ನಾಗರ ಹಾವು ಕಡಿತಕ್ಕೆ ಒಳಗಾದ ಏಳು ವರ್ಷದ ಅಮೀದ್ ಕುಮಾರ್ ಎಂಬ ಮಗುವಿನ ಪ್ರಾಣ ಉಳಿಸಲು ಸಾಕಷ್ಟು ಪ್ರಯತ್ನ ಮಾಡುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ತಾಲ್ಲೂಕಿನ ಕೋಡಿಹಳ್ಳಿ ಸಮೀಪದಲ್ಲಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರ ಕುಟುಂಬ ವಾಸವಿದ್ದು ಇಂದು ಏಳು ವರ್ಷದ ಕಂದಮ್ಮ ಅಮೀದ್ ಕುಮಾರ್ ಗೆ ನಾಗರ ಹಾವು ಕಚ್ಚಿದ್ದು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ಪೋಷಕರು ಕರೆತಂದಿದ್ದಾರೆ. ಮಗುವಿನ ಪರಿಸ್ಥಿತಿ ಬಹಳ ಗಂಭೀರವಾಗಿದ್ದು ಉಸಿರಾಟ ಬಹುತೇಕ ನಿಂತು ಹೋಗಿದ್ದ ಕಾರಣ ಆಸ್ಪತ್ರೆ ವೈದ್ಯರಾದ ಡಾ. ರಾಜು, ಡಾ. ವಿಜಯ ರವರು ಶುಶ್ರೂಷಕ ಅಧಿಕಾರಿಗಳಾದ ದೀಪು, ರಂಜಿತ, ಭವ್ಯ ಹಾಗೂ ಸಿಬ್ಬಂದಿ ವಿಜಯ್ ಸಹಕಾರದೊಂದಿಗೆ ತುರ್ತು ಚಿಕಿತ್ಸೆ ನೀಡಲು ಮುಂದಾಗಿದ್ದು ಸತತ ಪ್ರಯತ್ನದ ಫಲವಾಗಿ ಮಗು ಸ್ವಲ್ಪ ಮಟ್ಟಿಗೆ ಉಸಿರಾಟ ಮಾಡಲು ಪ್ರಾರಂಭಿಸಿದೆ.

ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ನಲ್ಲಿ ಚಾಲಕ ಮಧು ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು,ಸದ್ಯ ಏಳು ವರ್ಷದ ಅಮೀದ್ ಕುಮಾರ್ ರನ್ನು ಮಕ್ಕಳ ತುರ್ತುನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಗುವಿನ ಆರೋಗ್ಯ ಸ್ಥಿತಿ ಈಗಲೂ ಗಂಭೀರವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ . ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪುಟ್ಟ ಬಾಲಕ ಗುಣಮುಖಲಾಗಲೆಂದು ಆಸ್ಪತ್ರೆ ಸಿಬ್ಬಂದಿ, ಸಾರ್ವಜನಿಕರು ಹಾರೈಸಿದ್ದಾರೆ.
