ಸಮಾಜದಲ್ಲಿ ವ್ಯಸನಕ್ಕೆ ಬಲಿಯಾಗಿ ತನ್ನ ಜೀವ ಮತ್ತು ಜೀವನವನ್ನು ಹಾಳುಮಾಡಿಕೊಳ್ಳುವಂತಹ ವ್ಯಕ್ತಿಗಳ ಮನಃಪರಿವರ್ತನೆ ಮಾಡುವ ಮೂಲಕ ಮದ್ಯವ್ಯಾಸನಿಗಳಿಗೆ ಒಂದು ಕುಟುಂಬವನ್ನು ಕಟ್ಟುವಂತಹ ಪರಿಕಲ್ಪನೆಯ ಮೂಲಕ ಮದ್ಯವರ್ಜನ ಶಿಬಿರಗಳನ್ನು ನೆಡೆಸಲಾಗುತ್ತಿದೆ ಎಂದು ಯೋಜನಾಧಿಕಾರಿ ತಿಮ್ಮಯ್ಯ ನಾಯಕ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ ಆಯೋಜನೆ ಮಾಡಲಾಗಿದ್ದ 1972 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮಧ್ಯವರ್ಜನ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನೆಡೆಯುತ್ತಿರುವ ಸಮಾಜದ ಮಾದರಿ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿದ್ದು ಈ ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ನೊಂದ ಕುಟುಂಬಗಳು ನೆಮ್ಮದಿಯ ಬದುಕು ನಡೆಸುವಂತಾಗಿದೆ, ಅಲ್ಲದೇ ಕುಡಿತದ ಚಟಕ್ಕೆ ಬಲಿಯಾಗಿ ಜೀವನ ಮೌಲ್ಯ ಮರೆತ ಎಷ್ಟೋ ಜನರಿಗೆ ಮತ್ತೆ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಮಾರ್ಗದರ್ಶನ ನೀಡಿದೆ ಎಂದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಒಂದು ಧಾರ್ಮಿಕ ಕ್ಷೇತ್ರವಾಗಿ ಉಳಿಯದೆ. ಯಾವುದೇ ಜಾತಿ ಭೇದವಿಲ್ಲದೆ ಸಮಾಜದಲ್ಲಿ ಪ್ರತಿಯೊಂದು ಸಮುದಾಯವು ತನ್ನದೇ ಆದ ಬದುಕು ಕಟ್ಟಿಕೊಳ್ಳಲು ಹಲವು ರೀತಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ .
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಗುಡಿ ಕೈಗಾರಿಕೆ ಹಾಗೂ ಸ್ವಯಂ ಉದ್ಯೋಗ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ರೂಪಿಸಿದೆ , ಇಂದು ಈ ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ನೊಂದ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸಲಿವೆ ಇಂತಹ ಮತ್ತಷ್ಟು ಕಾರ್ಯಕ್ರಮಗಳು ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಮಾತನಾಡಿ ಮದ್ಯಪಾನದ ಚಟಕ್ಕೆ ಬಲಿಯಾಗಿ ಹಲವಾರು ಸಮಸ್ಯೆಗಳಿಂದ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದು,ಅಂತಹ ಕುಟುಂಬಗಳ ಅಭಿವೃದ್ಧಿ ಹಾಗೂ ಮದ್ಯವ್ಯಾಸನಿಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಮಧ್ಯವರ್ಜನ ಶಿಬಿರ ಸಹಕರಿಯಾಗಿದೆ.
ಈ ಶಿಬಿರದಲ್ಲಿ ಮದ್ಯ ವ್ಯಸನಕ್ಕೆ ಬಲಿಯಾಗಿದ್ದ 50 ಜನರನ್ನು ಗುಣಪಡಿಸಲಾಗಿದೆ. ಅಂದರೆ ಈ ಶಿಬಿರದಿಂದಾಗಿ 50 ಕುಟುಂಬಗಳು ನೆಮ್ಮದಿಯ ಜೀವನ ನಡೆಸಲಿವೆ. ಮಧ್ಯವರ್ಜನ ಶಿಬಿರವು ಯಾವುದೇ ಅಡ್ಡಿ ಆತಂಗಗಳಿಲ್ಲದೆ ಸುಸೂತ್ರವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ತಾ.ನ.ಪ್ರಭುದೇವ್,ನಿವೃತ್ತ ಶಿಕ್ಷಕರಾದ ಕೆ.ಮಹಲಿಂಗಯ್ಯ, ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ, ಕಂಟನಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೋಭರಾಜ್ ಗೋಪಾಲ್, ಜಿಲ್ಲಾ ಜನಜಾಗೃತಿ ಸದಸ್ಯರಾದ ವಾಣಿ, ಮಮತ, ಪುಷ್ಪ,ಧರ್ಮೆಂದ್ರ, ರಮೇಶ್,ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ದಿನೇಶ್, ಶಿಬಿರಾಧಿಕಾರಿ ದೇವಿಪ್ರಸಾದ್,ಮೇಲ್ವಿಚಾರಕರಾದ ಲೋಹಿತ್ ಗೌಡ, ಸೇರಿದಂತೆ ಸೇವಾಪ್ರತಿನಿಧಿಗಳು ನವಜೀವನ ಸಮಿತಿ ಸದಸ್ಯರು ಹಾಜರಿದ್ದರು.
