ಯಲಹಂಕ : ಮದ್ಯವರ್ಜನ ಶಿಬಿರ ಇದೊಂದು ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮವಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಆದ್ದರಿಂದ ಸಾರ್ವಜನಿಕರ ತನು – ಮನ – ಧನ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಜಿಲ್ಲಾ ನಿರ್ದೇಶಕ ಉಮರಬ್ಬ ತಿಳಿಸಿದರು.
ರಾಜನಕುಂಟೆ ಅದ್ದಿಗಾನಹಳ್ಳಿಯ ಶ್ರೀ ಪಟಾಲಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ನಡೆದ 1982ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭ, ವಿಸ್ತರಣೆಯ ಅನುಭವ ಹಾಗೂ ಅಸಾಮಾನ್ಯ ಸಾಧನೆಗಳ ಪರಿಚಯದೊಂದಿಗೆ ಸಮುದಾಯದ ಕಾರ್ಯಕ್ರಮಗಳಾದ ನಮ್ಮೂರು ನಮ್ಮ ಕೆರೆ, ರುದ್ರಭೂಮಿ ಅನುದಾನ, ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರ, ಶಾಲೆಗಳಿಗೆ ಪೀಠೋಪಕರಣ ಒದಗಣೆ, ಜ್ಞಾನದೀಪ ಕಾರ್ಯಕ್ರಮದ ಮುಖೇನ ಗೌರವ ಶಿಕ್ಷಕರ ಒದಗಣೆ, ಶಿಷ್ಯವೇತನ, ಮಾಸಾಶನ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ, ಹಾಗೂ ಧಾರ್ಮಿಕ ಕ್ಷೇತ್ರ ಹೀಗೆ ಹಲವು ವಿಭಾಗಗಳಲ್ಲಿ ಜನಮೆಚ್ಚುಗೆಯೊಂದಿಗೆ ಸಂಸ್ಥೆಯು ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಾಂಕೇತಿಕವಾಗಿ ವೇದಿಕೆಯಲ್ಲಿದ್ದ ಗಣ್ಯರು ನೆರವೇರಿಸಿದರು
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯನಾಯಕ್ ಜನಜಾಗೃತಿ ವೇದಿಕೆ ಪ್ರಾರಂಭ, ಜನಜಾಗೃತಿ ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು

ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಪ್ರೆಸಿಲ್ಲಾ ಡಿಸೋಜಾ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ದರ್ಶನ್ ಎಂ.ಎಸ್ ಮೇಲ್ವಿಚಾರಕರು ಜನಜಾಗೃತಿ ವಿಭಾಗ ಪ್ರಾದೇಶಿಕ ಕಛೇರಿ ಬೆಂಗಳೂರು ಇವರುಗಳು ಉಪಸ್ಥಿತರಿದ್ದು ಎಂಟು ದಿನಗಳ ಮದ್ಯವರ್ಜನ ಶಿಬಿರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಮಾರಸಂದ್ರ ವಲಯದ ಮೇಲ್ವಿಚಾರಕರಾದ ಭಾರತಿ, ಸೇವಾಪ್ರತಿನಿಧಿಗಳು, ಯಲಹಂಕ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು , ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಸೇವಾಪ್ರತಿನಿಧಿಗಳಾದ ಮಾಲಾ, ಶಾರದ ನೀಲಮ್ಮ ಪಾಟೀಲ್, ಸವಿತಾ ಶೆಟ್ಟಿ, ಸೇರಿದಂತೆ ಹಲವರು ಹಾಜರಿದ್ದರು.
