ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಲಾ ಕಾಲೇಜಿನಲ್ಲಿ ನಾಳೆ (ಸೆ.24) ಯಿಂದ ಪ್ರಥಮ ವರ್ಷದ ಎಲ್ ಎಲ್ ಬಿ(law) ತರಗತಿಗಳು ಅಧಿಕೃತವಾಗಿ ಪ್ರಾರಂಭವಾಗಲಿವೆ ಎಂದು ಪ್ರಾಂಶುಪಾಲ ಡಾ.ವೆಂಕಟೇಶ್ ಟಿ.ಬಿ ತಿಳಿಸಿದ್ದಾರೆ.
ಸೆ.24ರ ಬುಧವಾರ ಬೆಳಗ್ಗೆ 9:30ರಿಂದ ತರಗತಿಗಳು ಪ್ರಾರಂಭವಾಗಿ ಮಧ್ಯಾಹ್ನ 2:30ಕ್ಕೆ ಮುಕ್ತಾಯವಾಗಲಿವೆ. ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಇರಲಿದೆ. ಈಗಾಗಲೇ ಮೂರು ವರ್ಷದ ಎಲ್ ಎಲ್ ಬಿ ಪದವಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ನಾಳೆಯಿಂದ ಪ್ರಾರಂಭವಾಗುವ ತರಗತಿಗಳಿಗೆ ಹಾಜರಾಗಬೇಕು ಎಂದು ತಿಳಿಸಿದರು.

ಮೂರು ವರ್ಷದ ಎಲ್ ಎಲ್ ಬಿ ಪದವಿಯ ಮೊದಲ ಬ್ಯಾಚ್ ನಲ್ಲಿ ಒಟ್ಟು 9 ಮಂದಿ ವಿದ್ಯಾರ್ಥಿನಿಯರು, 51 ಮಂದಿ ವಿದ್ಯಾರ್ಥಿಗಳು ಸೇರಿ 60 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಕಾನೂನು ಪದವಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಇದೇ ಮೊದಲ ಬಾರಿಗೆ ಶ್ರೀ ಕೊಂಗಾಡಿಯಪ್ಪ ಕಾಲೇಜ್ ಕ್ಯಾಂಪಸ್ ನಲ್ಲಿ ಲಾ ಕೋರ್ಸ್ ಪ್ರಾರಂಭ ಮಾಡಲಾಗಿದೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ದೂರದ ಜಿಲ್ಲೆಗಳಿಗೆ ಹೋಗಿ ಪದವಿ ಪಡೆಯಲಾಗುತ್ತಿತ್ತು. ಇದೀಗ ಜಿಲ್ಲೆಯ ಅದರಲ್ಲೂ ದೊಡ್ಡಬಳ್ಳಾಪುರ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಲಾ ಕೋರ್ಸ್ ನ್ನು ಈ ವರ್ಷದಿಂದ ಆರಂಭಿಸಲಾಗಿದೆ ಎಂದು ಹೇಳಿದರು.
ತರಗತಿಗಳನ್ನು ಪ್ರಾರಂಭ ಮಾಡಲು ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ನುರಿತ ಉಪನ್ಯಾಸಕರು, ಮೂಟ್ ಕೋರ್ಟ್ ವ್ಯವಸ್ಥೆ, ಮಧ್ಯಾಹ್ನದ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಪಾಠ ಪ್ರವಚನಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ತರಗತಿಗಳಿಗೆ ನ್ಯಾಯಾಧೀಶರು, ಪ್ರಖ್ಯಾತ ವಕೀಲರು, ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕಾನೂನು ತರಬೇತಿ ನೀಡಲಾಗುವುದು ಎಂದರು.
